Saturday, October 18, 2025

ಇತಿಹಾಸ ಸೃಷ್ಟಿಸಿದ ಹಾಸನಾಂಬೆ ಜಾತ್ರೆ: 8 ದಿನಗಳಲ್ಲಿ ಕೋಟಿ ಕೋಟಿ ಆದಾಯ, ಭಕ್ತರ ಪ್ರವಾಹ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸಿದ್ಧ ಹಾಸನಾಂಬ ದರ್ಶನೋತ್ಸವ ಆರಂಭಗೊಂಡ ಕೇವಲ ಎಂಟು ದಿನಗಳಲ್ಲಿಯೇ ಹೊಸ ಇತಿಹಾಸ ಸೃಷ್ಟಿಯಾಗಿದೆ. ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ಈವರೆಗೆ 15,30,000ಕ್ಕೂ ಹೆಚ್ಚು ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಈ ಅಲೆ ದೇವಾಲಯದ ಆದಾಯದಲ್ಲೂ ದಾಖಲೆ ಬರೆದಿದ್ದು, ಕೇವಲ 8 ದಿನಗಳಲ್ಲಿ 10.5 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಈ ವರ್ಷ ವಿಐಪಿ ಮತ್ತು ವಿವಿಐಪಿ ಪಾಸ್‌ಗಳನ್ನು ರದ್ದುಗೊಳಿಸಿರುವ ಜಿಲ್ಲಾಡಳಿತದ ಕ್ರಮದಿಂದಾಗಿ ಸಾಮಾನ್ಯ ಭಕ್ತರು ಸುಗಮವಾಗಿ ದರ್ಶನ ಪಡೆಯುತ್ತಿದ್ದು, ಇದು ಭಕ್ತರಲ್ಲಿ ಸಂತಸ ಮೂಡಿಸಿದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಹಾಸನಕ್ಕೆ ಬರುತ್ತಿದೆ. ಇನ್ನೂ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಅವಧಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ದರ್ಶನ ಸಮಯ ಹೆಚ್ಚಳ: ಡಿಸಿಗೂ 3 ಗಂಟೆ ಕಾಯುವ ಅನಿವಾರ್ಯತೆ
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರದ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದು, ಇದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ. ಇಂದು ಒಂದೇ ದಿನ 1,60,000 ಭಕ್ತರು ದರ್ಶನ ಪಡೆದಿದ್ದು, ಎಲ್ಲ ಸರತಿ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ಇಂದು ಒಟ್ಟು 4 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ.

ತಮ್ಮದೇ ಅನುಭವವನ್ನು ಹಂಚಿಕೊಂಡ ಡಿಸಿ ಲತಾಕುಮಾರಿ, “ನಾನೇ ಧರ್ಮ ದರ್ಶನದ ಸಾಲಿನಲ್ಲಿ ಬಂದು 3 ಗಂಟೆಗಳ ನಂತರ ದರ್ಶನ ಪಡೆದಿದ್ದೇನೆ. ಈಗ ದರ್ಶನದ ಸಮಯ ಹೆಚ್ಚಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ಸಾಲಿನಲ್ಲಿ ನಿಂತವರು, ಸಂಜೆ 4 ಗಂಟೆಗೆ ದರ್ಶನ ಪಡೆದ ಉದಾಹರಣೆಗಳಿವೆ,” ಎಂದು ಮಾಹಿತಿ ನೀಡಿದರು. ಮುಂಬರುವ ದಿನಗಳಲ್ಲಿ ಒಂದು ದಿನದ ಭಕ್ತರ ಸಂಖ್ಯೆ ಐದು ಲಕ್ಷವನ್ನೂ ಮೀರಬಹುದು ಎಂದು ಅವರು ಅಂದಾಜಿಸಿದರು.

ಭಕ್ತರಿಗೆ ಡಿಸಿ ಮನವಿ: ತಾಳ್ಮೆ ಕಲಿಯಿರಿ, ಮೊಬೈಲ್‌ ಬಳಸಬೇಡಿ!
ಗರ್ಭಗುಡಿ ಬಳಿ ತಳ್ಳಾಟ ನಡೆಯುತ್ತಿದೆ ಎಂದು ಕೆಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಭಕ್ತರು ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೇವಲ ಕೆಲವೇ ಸೆಕೆಂಡುಗಳ ಕಾಲ ಹಾಸನಾಂಬೆಯ ದರ್ಶನ ಸಿಗುವುದರಿಂದ, ಭಕ್ತರು ಪೂರ್ವ ತಯಾರಿ ಮಾಡಿಕೊಂಡು ಬರಬೇಕು ಎಂದು ಡಿಸಿ ಮನವಿ ಮಾಡಿದರು. “ಮೊದಲು ತಾಳ್ಮೆ ಕಲಿಯಿರಿ, ಸರತಿ ಸಾಲಿನಲ್ಲಿ ಮೊಬೈಲ್‌ಫೋನ್‌ ಬಳಸಬೇಡಿ. ಮಕ್ಕಳನ್ನು ಮೇಲೆತ್ತಿಕೊಂಡು ಬನ್ನಿ. ತುಂಬಾ ಒತ್ತಡವಿದೆ. ದ್ವಾರ ಬಾಗಿಲು ಬಂದಾಗ ಮಾತ್ರ ದೇವಿಯ ಕಡೆಗೆ ನೋಡಿ,” ಎಂದು ಭಕ್ತರಿಗೆ ಕೆ.ಎಸ್.ಲತಾಕುಮಾರಿ ಮಾನವಿ ಮಾಡಿದರು.

error: Content is protected !!