ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ದರ್ಶನೋತ್ಸವವು ಅಂತಿಮ ಘಟ್ಟಕ್ಕೆ ತಲುಪಿದೆ. ದೀಪಾವಳಿ ಹಬ್ಬದ ಸಂಭ್ರಮವಿದ್ದರೂ, ಭಕ್ತಸಾಗರವು ದೇವಿಯ ದರ್ಶನಕ್ಕಾಗಿ ಹರಿದು ಬಂದಿದ್ದು, ಈ ಬಾರಿಯ ಉತ್ಸವವು ಹಲವಾರು ಹೊಸ ದಾಖಲೆಗಳನ್ನು ಬರೆದಿದೆ.
ಅಕ್ಟೋಬರ್ 10 ರಂದು ಪ್ರಾರಂಭವಾದ ಈ 10 ದಿನಗಳ ದರ್ಶನೋತ್ಸವವು ಅಕ್ಟೋಬರ್ 20 ರವರೆಗೆ (ನಿನ್ನೆ) ಒಟ್ಟು 23 ಲಕ್ಷಕ್ಕೂ ಅಧಿಕ ಭಕ್ತರನ್ನು ಆಕರ್ಷಿಸುವ ಮೂಲಕ ಇತಿಹಾಸದಲ್ಲೇ ಅತ್ಯಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿದ ದಾಖಲೆಯನ್ನು ಸೃಷ್ಟಿಸಿದೆ.
ಕೇವಲ ಭಕ್ತರ ಸಂಖ್ಯೆಯಲ್ಲಿ ಮಾತ್ರವಲ್ಲದೇ, ಆದಾಯದ ವಿಷಯದಲ್ಲೂ ದೇವಸ್ಥಾನವು ಗಣನೀಯ ಸಾಧನೆ ಮಾಡಿದೆ. ಇಲ್ಲಿಯವರೆಗೆ, ₹1,000 ಮತ್ತು ₹300 ರೂಪಾಯಿಗಳ ಟಿಕೆಟ್ ಸೌಲಭ್ಯದ ಮೂಲಕ 3,40,260 ಭಕ್ತರು ದರ್ಶನ ಪಡೆದಿದ್ದಾರೆ. ಟಿಕೆಟ್ ಮಾರಾಟ ಮತ್ತು ಲಾಡು ಪ್ರಸಾದದ ಮೂಲಕ ದೇಗುಲಕ್ಕೆ ಒಟ್ಟು 22 ಕೋಟಿ ರೂಪಾಯಿಗಳ ಆದಾಯ ಹರಿದು ಬಂದಿದೆ.
ಇಂದು, ಹಾಸನಾಂಬೆ ದರ್ಶನಕ್ಕೆ ಕೊನೆಯ ದಿನವಾಗಿದ್ದು, ರಾತ್ರಿ 8 ಗಂಟೆಗೆ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ದೇವಿಯ ಕಣ್ತುಂಬಿಕೊಳ್ಳಲು ಬಯಸುವ ಭಕ್ತರು ಕೊನೆಯ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂದು ಮತ್ತು ನಾಳೆ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದ್ದು, ಸಂಜೆ 7ಕ್ಕೆ ಅದ್ಧೂರಿ ತೆರೆ ಬೀಳಲಿದೆ. ನಾಳೆ ದೇವಸ್ಥಾನದ ಬಾಗಿಲು ಮುಚ್ಚಲಿದ್ದು, ದೇವಿ ಮತ್ತೆ ಮುಂದಿನ ವರ್ಷ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಕೊನೆಯ ದಿನವಾಗಿರುವುದರಿಂದ ಇಂದು ಸಂಗ್ರಹವಾಗುವ ಆದಾಯದಿಂದ ಒಟ್ಟು ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.