January18, 2026
Sunday, January 18, 2026
spot_img

‘ಬೆಂಕಿ’ ಗದ್ದಲದ ಮಧ್ಯೆಯೇ ವಿಧಾನಸಭೆಯಲ್ಲಿ ʼದ್ವೇಷ ಭಾಷಣʼ ಮಸೂದೆ ಅಂಗೀಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಗುರುವಾರ ಕರ್ನಾಟಕ ದ್ವೇಷ ಭಾಷಣ ಮತ್ತು‌ ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ.

ಕಳೆದ ಬುಧವಾರ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಚರ್ಚೆಯ ಬಳಿಕ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ಇಂದು ಮಸೂದೆಯನ್ನು ಅಂಗೀಕರಿಸಲಾಗಿದೆ.

ದ್ವೇಷ ಭಾಷಣ ತಡೆಯುವ ದೇಶದ ಮೊದಲ ಕಾನೂನು ಇದಾಗಿದ್ದು, ಈ ಮಸೂದೆಯು ಒಂದು ಲಕ್ಷ ರೂ.ಗಳವರೆಗೆ ದಂಡ ಮತ್ತು ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶ ನೀಡುತ್ತದೆ. ಈ ಮಸೂದೆಯನ್ನು ಡಿಸೆಂಬರ್ 4 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿತ್ತು.

ಈ ಮಸೂದೆ​ ಅಂಗೀಕಾರಗೊಳ್ಳುತ್ತಿದ್ದಂತೆ ಸಚಿವ ಭೈರತಿ ಸುರೇಶ್ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ನಡುವೆ ಏಕವಚನದಲ್ಲಿ ವಾಕ್ಸಮರ ನಡೆಯಿತು.

ಬೈರತಿ ಸುರೇಶ್ ಅವರು, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧದಿಂದಾಗಿ ಕರಾವಳಿ ಕರ್ನಾಟಕ “ಹೊತ್ತಿ ಉರಿಯುತ್ತಿದೆ”. ಅಲ್ಲಿ ಬೆಂಕಿ ಹಚ್ಚಿದ್ದೀರಿ. ಈಗ ಇಲ್ಲಿಯೂ ಬೆಂಕಿ ಹಚ್ಚುತ್ತಿದ್ದೀರಿ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು ಮತ್ತು ಸಚಿವರು ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಸೂದೆ​ ಅಂಗೀಕಾರವಾಗುತ್ತಿದ್ದಂತೆ, ಬಿಲ್ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರು.

ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಸದನವನ್ನು ಮುಂದೂಡಿದರು.

Must Read

error: Content is protected !!