ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳನ್ನು ಜನರ ಆಶಯಕ್ಕೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸುವ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಈ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳ ಜನತೆ ಈ ವಿಲೀನವನ್ನು ವಿರೋಧಿಸುತ್ತಿದ್ದಾರೆ.
ಈ ನಿರ್ಧಾರದ ವಿರುದ್ಧ ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಹಾಗೂ ರೈತ ಮುಖಂಡರಾದ ಸುನಂದಾ ಜಯರಾಂ ನೇತೃತ್ವದಲ್ಲಿ ಕಳೆದ 70 ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ.
ಜನಾಭಿಪ್ರಾಯ ಪಡೆಯದೇ ಸಂಪುಟ ಸಭೆಯಲ್ಲಿ ಏಕಪಕ್ಷೀಯವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರ್ಕಾರವು ಜನರ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಮುಖ್ಯಮಂತ್ರಿಗಳು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ತಡೆಯೊಡ್ಡಬೇಕು ಎಂದು ಆಗ್ರಹಿಸಿದ್ದಾರೆ.



