ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ ನಿಧನದ ನಂತರ, ಪತ್ನಿ ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಮೊದಲ ಬಾರಿಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನವೆಂಬರ್ 24ರಂದು 89ನೇ ವಯಸ್ಸಿನಲ್ಲಿ ಧರ್ಮೇಂದ್ರ ಅವರು ಇಹಲೋಕ ತ್ಯಜಿಸಿದ್ದರು. ಇಂದು ಸಂಜೆ ನಡೆಯಲಿರುವ ಪ್ರಾರ್ಥನಾ ಸಭೆಗೆ ಕೆಲವೇ ಗಂಟೆ ಮೊದಲು ಹೇಮಾ ಮಾಲಿನಿ ತಮ್ಮ ಭಾವನೆಗಳನ್ನು ಮಾತಿನಲ್ಲಿ ಪೋಣಿಸಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಪೋಸ್ಟ್ ನಲ್ಲಿ, “ಧರಂ ಜಿ ನನಗೆ ಎಲ್ಲವೂ ಆಗಿದ್ದರು. ಪ್ರೀತಿಯ ಪತಿ, ನಮ್ಮ ಇಬ್ಬರು ಮಗಳು ಈಶಾ ಮತ್ತು ಅಹಾನಾ ಅವರಿಗೆ ಅಚ್ಚುಮೆಚ್ಚಿನ ತಂದೆ, ನನ್ನ ಸ್ನೇಹಿತ, ಮಾರ್ಗದರ್ಶಕ, ತತ್ವಜ್ಞಾನಿ, ಕವಿ ಹಾಗೂ ಯಾವಾಗಲೂ ನನ್ನ ಜೊತೆ ನಿಲ್ಲುವ ವ್ಯಕ್ತಿ. ಅವರು ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಗಿದ್ದರು” ಎಂದು ಬರೆದಿದ್ದಾರೆ. ತಮ್ಮ ಪತಿಯ ವಿನಮ್ರ ಸ್ವಭಾವವನ್ನು ನೆನೆಸಿಕೊಂಡ ಅವರು, “ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನನ್ನ ಜೀವನದಲ್ಲಿ ಉಂಟಾದ ಶೂನ್ಯತೆ ಸದಾ ಉಳಿಯಲಿದೆ. ವರ್ಷಗಳ ಪ್ರಯಾಣದಲ್ಲಿ ನಾವು ಕಂಡ ಕ್ಷಣಗಳು ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತವೆ” ಎಂದು ಬರೆದುಕೊಂಡಿದ್ದಾರೆ.

