Thursday, September 4, 2025

ದಾವಣಗೆರೆಯಲ್ಲಿ ನಕಲಿ ಕೂದಲು ಕಸಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ

ಹೊಸದಿಗಂತ ವರದಿ, ದಾವಣಗೆರೆ:

ನಕಲಿ ಕೂದಲು ಕಸಿ ಕ್ಲಿನಿಕ್ ಗಳ ಮೇಲೆ ಗುರುವಾರ ದಾಳಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅನಧಿಕೃತ ಕೇಂದ್ರಗಳಿಗೆ ಬೀಗ ಜಡಿದಿದ್ದಾರೆ. ಈ ವೇಳೆ ಉಪಕರಣ ವಶಕ್ಕೆ‌ ಪಡೆದು, ಕೇಸ್ ದಾಖಲಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಭಾರತೀಯ ಚರ್ಮರೋಗ, ರತಿರೋಗ ಹಾಗೂ ಕುಷ್ಠರೋಗ ತಜ್ಞರ ಸಂಘ ನೀಡಿದ ದೂರು ಆಧರಿಸಿ ಈ ದಾಳಿ ನಡೆದಿದೆ. ಈಗಾಗಲೇ 3 ಕ್ಲಿನಿಕ್‌ ಗಳು ಬಾಗಿಲು ಮುಚ್ಚಿದ್ದು, ಪರವಾನಗಿ‌ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಉಳಿದ 12 ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 15 ತಂಡ ಈ ದಾಳಿಯಲ್ಲಿ ಭಾಗಿಯಾಗಿತ್ತು. ಶಾಮನೂರು ರಸ್ತೆ, ರಾಮ್‌ ಅಂಡ್‌ ಕೊ ವೃತ್ತ, ಎಂಸಿ ಕಾಲೋನಿ, ಜೀವನ್‌ ಭೀಮಾ ನಗರ, ಪಿ.ಜೆ. ಬಡಾವಣೆ, ಕುವೆಂಪು ನಗರ, ವಿದ್ಯಾನಗರ, ದೇವರಾಜ ಅರಸು ಬಡಾವಣೆ ಸೇರಿ ನಗರದ ವಿವಿಧೆಡೆ ದಾಳಿ ನಡೆದಿದೆ.

ವೈದ್ಯಕೀಯ ಚಿಕಿತ್ಸೆ ನೀಡುವ ಸಂಸ್ಥೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ(ಕೆಪಿಎಂಇ) ಪರವಾನಿಗೆ ಪಡೆಯುವುದು ಕಡ್ಡಾಯ. ದಾಳಿಯ ವೇಳೆ ಅಗತ್ಯ ದಾಖಲೆ‌ನೀಡದ ಕ್ಲಿನಿಕ್‌ ಗಳ ಬಾಗಿಲು ಮುಚ್ಚಿಸಲಾಗಿದೆ. ಈ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಷಣ್ಮುಖಪ್ಪ ಮಾಹಿತಿ ನೀಡಿದ್ದಾರೆ.

ಚಿಕಿತ್ಸೆಗೆ ಕನಿಷ್ಠ 50,000ದಿಂದ 1 ಲಕ್ಷದವರೆಗೆ ದರ ನಿಗದಿ ಮಾಡಿದ್ದು, ಬಹುತೇಕ ಕೇಶ ಕಸಿ ಕ್ಲಿನಿಕ್‌ ಗಳಲ್ಲಿ ಚರ್ಮರೋಗ ತಜ್ಞರೇ ಇಲ್ಲದಿರುವುದು ತಿಳಿದುಬಂದಿದೆ. ಬಿಎಎಂಎಸ್‌ ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿಯೇ ಕೇಶ ಕಸಿ ಮಾಡುವುದು ದಾಳಿ ವೇಳೆ ಪತ್ತೆಯಾಗಿದೆ. ವೈದ್ಯರ ವಿವರ ಚಿಕಿತ್ಸೆ ಹಾಗೂ ದರದ ಮಾಹಿತಿ ಪ್ರದರ್ಶಿಸಿಲ್ಲ. ಎಂಬಿಬಿಎಸ್‌ ವೈದ್ಯರ ಅನುಪಸ್ಥಿತಿಯಲ್ಲಿ ಅರಿವಳಿಕೆ ನೀಡುತ್ತಿದ್ದರು. ತಲೆ, ಮುಖಕ್ಕೆ ನೀಡುವ ಈ ಚಿಕಿತ್ಸೆಯಿಂದ ಮಿದುಳಿಗೆ ತೊಂದರೆ ಉಂಟಾಗುವ ಅಪಾಯವಿದೆ ಎನ್ನಲಾಗಿದೆ.

ಇದನ್ನೂ ಓದಿ