ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿದೆ.
ಕೋಲಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಾಲಾರ್ ನದಿಯ ಕೆರೆಗಳಾದ ಬೇತಮಂಗಲ, ಕೋಡಿಹಳ್ಳಿ, ಮತ್ತು ಕ್ಯಾಸಂಬಳ್ಳಿ ಹೋಬಳಿಯ ರಾಮಸಾಗರ ಗ್ರಾಮದ ಕೆರೆಗಳು ತುಂಬಿ ಹರಿಯುತ್ತಿವೆ. ಈ ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಿರ್ಬಂಧಿಸಿದ್ದಾರೆ.
ಪಾಲಾರ್ ನದಿಯ ಗೇಟ್ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಾಂತ್ರಿಕ ತಂಡ ಶೀಘ್ರದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಕಡೂರು ತಾಲೂಕಿನ ವೇದಾವತಿ ಮತ್ತು ಕುಂತಿ ಹೊಳೆ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ನದಿ ತೀರದ ಅಡಿಕೆ ಮತ್ತು ತೆಂಗಿನ ತೋಟಗಳು ಜಲಾವೃತಗೊಂಡಿವೆ. ಬೀರೂರು, ಕಡೂರು, ಮತ್ತು ಅಜ್ಜಂಪುರ ವ್ಯಾಪ್ತಿಯಲ್ಲಿ ಈರುಳ್ಳಿ ಮತ್ತು ತರಕಾರಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ.

