ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವಲ್ಲೂರು, ತಂಜಾವೂರು, ಪುದುಕೊಟ್ಟೈ ಮತ್ತು ರಾಮನಾಥಪುರಂಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್‌ಎಂಸಿ) ಅಧಿಕಾರಿಯೊಬ್ಬರು ತಿಳಿಸಿದರು. ನೆರೆಯ ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೂ ಇದೇ ರೀತಿಯ ಎಚ್ಚರಿಕೆ ನೀಡಲಾಗಿದೆ.
ಉತ್ತರ ಕರಾವಳಿಯ ತೀರದಲ್ಲಿ ಜೋರು ಮಳೆಯಾಗುತ್ತಿದೆ. ಚೆನ್ನೈ, ತಿರುವಳ್ಳೂರು, ಚೆಂಗಲ್ಪೆಟ್ಟು, ಕಾಂಚೀಪುರಂ, ಕಲಾಕುರಿಚಿ, ಅರಿಯಲೂರು, ಪೆರಂಬಲೂರು, ತೂಥಕುಡಿ, ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಿಎಂ ಸ್ಟಾಲಿನ್, ಪರಿಹಾರ ಕಾರ್ಯಗಳು ಹಾಗೂ ನಿರಾಶ್ರಿತರ ತಾಣವನ್ನು ಸಿದ್ಧವಾಗಿರಿಸುವಂತೆ ಸೂಚನೆ ನೀಡಿದ್ದಾರೆ. ಆಹಾರ, ಕುಡಿಯುವ ನೀರು ಮತ್ತು ಔಷಧ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆಯೂ ಸೂಚಿಸಲಾಗಿದೆ. ಮಳೆಯಿಂದ ಉಂಟಾಗುವ ಹಾನಿ ತಗ್ಗಿಸಲು ಜೆಸಿಬಿ ಯಂತ್ರಗಳು, ದೋಣಿಗಳು, ಮೋಟಾರ್ ಪಂಪ್‌ಗಳು, ಟ್ರಕ್‌ಗಳು ಮತ್ತು ಗರಗಸಗಳಂತಹ ಅಗತ್ಯ ಸಲಕರಣೆಗಳೊಂದಿಗೆ ತಂಡಗಳು ಸಿದ್ಧವಾಗಿರುವಂತೆ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.
ತಿರುನೆಲ್ವೇಲಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆಗಳು ಹಾನಿಗೊಂಡಿವೆ.

