ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯ ನಡುವೆಯೂ ತಿರುಮಲ ಶ್ರೀ ವೆಂಕಟೇಶ್ವರನ ದರುಶನಕ್ಕಾಗಿ ಭಕ್ತರ ದಂಡು ನಿರಂತರವಾಗಿ ಹರಿದು ಬರುತ್ತಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತದ ಪರಿಣಾಮದಿಂದ ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ತಿರುಮಲ ಬೆಟ್ಟದಲ್ಲಿಯೂ ಮಳೆಯ ತೀವ್ರತೆ ಹೆಚ್ಚಾಗಿದೆ. ಇದರ ನಡುವೆಯೇ ಸಾವಿರಾರು ಭಕ್ತರು ದೇವರ ದರುಶನಕ್ಕಾಗಿ ಕ್ಯೂಗಳಲ್ಲಿ ನಿಂತು ಕಾಯುತ್ತಿದ್ದಾರೆ.
ಶುಕ್ರವಾರದ ದಿನ ಮಾತ್ರವೇ 71,000 ಕ್ಕೂ ಹೆಚ್ಚು ಭಕ್ತರು ಶ್ರೀ ತಿಮ್ಮಪ್ಪನ ದರುಶನ ಪಡೆದಿದ್ದು, ದೇವಾಲಯದ ಒಂದು ದಿನದ ಹುಂಡಿ ಆದಾಯವು 4.89 ಕೋಟಿ ರೂಪಾಯಿಗೆ ತಲುಪಿದೆ. ಆದರೆ ಮಳೆಯ ಪರಿಣಾಮದಿಂದ ದರುಶನದ ಅವಧಿ ಗಣನೀಯವಾಗಿ ಹೆಚ್ಚಳ ಕಂಡಿದೆ. ಪ್ರಸ್ತುತ ಭಕ್ತರು ಸಂಪೂರ್ಣ ದರುಶನಕ್ಕಾಗಿ ಸರಾಸರಿ 10 ರಿಂದ 12 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಿರುಮಲದ 20 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತಿದ್ದು, ಯಾವುದೇ ಟೋಕನ್ ಇಲ್ಲದೆ ಆಗಮಿಸುವ ಭಕ್ತರಿಗೆ ಇನ್ನಷ್ಟು ಸಮಯ ಹಿಡಿಯುತ್ತಿದೆ. ಮಳೆಯಲ್ಲಿಯೇ ಭಕ್ತರು ಕ್ಯೂಗಳಲ್ಲಿ ನಿಂತು ದರುಶನದ ನಿರೀಕ್ಷೆಯಲ್ಲಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ, ಪ್ರಕಾಶಂ, ನೆಲ್ಲೂರು, ತಿರುಪತಿ, ಬಾಪಟ್ಲಾ, ಕೃಷ್ಣಾ ಹಾಗೂ ಕೊನಸೀಮಾ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ, APSDMA (ಆಂಧ್ರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ತಿರುಮಲಕ್ಕೆ ತೆರಳುವ ಭಕ್ತರಿಗೆ ಎಚ್ಚರದಿಂದ ಇರಲು ಸೂಚನೆ ನೀಡಿದೆ.

