ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷಣದ ಮಂದಿರವೆನ್ನುವ ಶಾಲೆಯೇ ಇದೀಗ ಕ್ರೌರ್ಯದ ವೇದಿಕೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬನು ದೂರದ ಊರಿನಲ್ಲಿರುವ ತನ್ನ ಪೋಷಕರಿಗೆ ಬೇರೆಯವರ ಮೊಬೈಲ್ ಮೂಲಕ ಕರೆ ಮಾಡಿದ ಹಿನ್ನೆಲೆಯಲ್ಲಿ, ವೇದಪಾಠ ಶಾಲೆಯ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ಆಕ್ರೋಶಗೊಂಡು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೊಟ್ಟೆಯ ಮೇಲೆ ಕಾಲಿನಿಂದ ಒದ್ದು, ಶಾರೀರಿಕ ಹಿಂಸೆ ಮಾಡುತ್ತಿರುವ ದೃಶ್ಯ ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.
ಪೋಷಕರಿಗೆ ಕರೆ ಮಾಡಿದ ಎಂಬ ವಿಷಯಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಿಕ್ಷಕನ ಕ್ರಮ ಮಾನವೀಯತೆಯ ಮಿತಿಯನ್ನು ಮೀರಿ ಹೋಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ನಂತರ ಆರೋಪಿಯಾದ ಮುಖ್ಯ ಶಿಕ್ಷಕ ನಾಪತ್ತೆಯಾಗಿದ್ದು, ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.