ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ದಾಖಲೆಯ ಗೆಲುವು ಸಾಧಿಸಿದ್ದರೂ, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಸೋಲಿನ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರವಾಗಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು, ಮತ್ತು ರಾಹುಲ್ ಗಾಂಧಿ ತಮ್ಮ ಪಕ್ಷದ ಜೊತೆಗೆ ಮಿತ್ರಪಕ್ಷಗಳನ್ನೂ ಮುಳುಗಿಸುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು. ಬಿಹಾರದಲ್ಲಿ ಒಂದಂಕಿ ಸ್ಥಾನಗಳಿಗೆ ಸೀಮಿತವಾದ ಕಾಂಗ್ರೆಸ್ ಫಲಿತಾಂಶವನ್ನು ಉದಾಹರಿಸಿ, ರಾಹುಲ್ ಗಾಂಧಿ ಸೋಲಿನ ‘ಶತಕ’ ಬಾರಿಸಿದ್ದಾರೆ ಎಂದು ಟಾಂಗ್ ಕೊಟ್ಟರು.
ರಾಹುಲ್ ಗಾಂಧಿ ಆರೋಪಿಸುತ್ತಿದ್ದ ‘ವೋಟ್ ಚೋರಿ’ ಮತ್ತು ಇವಿಎಂ ಲೋಪಗಳ ಮಾತುಗಳಿಗೆ ಬಿಹಾರ ಮತದಾರರು ಯಾವುದೇ ಮಹತ್ವ ನೀಡಿಲ್ಲ ಎಂದು ಜೋಶಿ ಹೇಳಿದರು. ಆರೋಪ ರಾಜಕೀಯ ಮಾಡುವ ಬದಲು ಚುನಾವಣಾ ವ್ಯವಸ್ಥೆ ಮತ್ತು ಮತದಾರರನ್ನು ಗೌರವಿಸುವ ಸಮಯ ಇದು ಎಂದು ಅವರು ಚಾಟಿ ಬೀಸಿದರು. ರಾಹುಲ್ ಗಾಂಧಿಯ ತಂತ್ರವೇ ಮಹಾಘಟಬಂಧನ್ ಕುಸಿತಕ್ಕೆ ಕಾರಣವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ಎನ್‌ಡಿಎ ಗೆಲುವು ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ಅವರ ನಾಯಕತ್ವಕ್ಕೆ ಜನರ ನೇರ ಒಪ್ಪಿಗೆಯಾಗಿದೆ ಎಂದು ಜೋಶಿ ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿ ಕಾಂಗ್ರೆಸ್ 136 ಸ್ಥಾನ ಗೆದ್ದಾಗ ವೋಟ್ ಚೋರಿ ಮಾತುಗಳನ್ನಾಡದ ರಾಹುಲ್, ಬಿಹಾರದಲ್ಲಿ ಸೋಲುತ್ತಿದ್ದಂತೆಯೇ ಆರೋಪಗಳ ಸರಪಳಿ ಆರಂಭಿಸಿದ್ದಾರೆ ಎಂದು ಜೋಶಿ ಟೀಕಿಸಿದರು.

