January21, 2026
Wednesday, January 21, 2026
spot_img

ಅರೇ, ಮತ್ತೆ ಅದೇ ರಾಗ ಹಾಡಿದ ಟ್ರಂಪ್: ಭಾರತ-ಪಾಕಿಸ್ತಾನ ಯುದ್ಧ ತಪ್ಪಿಸಿದ್ದೇ ನಾನು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ್ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಯುದ್ಧವಾಗುವ ಭೀತಿ ಇತ್ತು. ಆದ್ರೆ ಅದನ್ನು ತಪ್ಪಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಒಪ್ಪಂದ 2025ರ ಪ್ರಮುಖ ಗೆಲುವುಗಳಲ್ಲಿ ಒಂದು. ತಮ್ಮ ಹಸ್ತಕ್ಷೇಪದಿಂದಾಗಿ ಎರಡು ರಾಷ್ಟ್ರಗಳ ನಡುವಿನ ಪರಮಾಣು ಯುದ್ಧ ತಪ್ಪಿದೆ ಎಂದು ಹೇಳಿದ್ದಾರೆ.

2025ರಲ್ಲಿ ಎಂಟು ಯುದ್ಧಗಳನ್ನು ಕೊನೆಗೊಳಿಸಿರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಾನು ನೊಬೆಲ್ ಪ್ರಶಸ್ತಿಗೆ ಅರ್ಹ ಎಂದು ಹೇಳಿರುವ ಅವರು, ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ಪರಮಾಣು ಯುದ್ಧಕ್ಕೆ ಮುಂದಾಗಿತ್ತು. ತಾನು ಹಸ್ತಕ್ಷೇಪ ನಡೆಸಿ ಅದನ್ನು ತಪ್ಪಿಸಿದೆ ಎಂದು ಅವರು ತಿಳಿಸಿದರು.

ತಾವು ಎರಡನೇ ಅವಧಿಯಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ 10 ತಿಂಗಳ ಅವಧಿಯಲ್ಲಿ ಎಂಟು ದೀರ್ಘಕಾಲೀನ ಸಂಘರ್ಷಗಳನ್ನು ಕೊನೆಗೊಳಿಸಿದ್ದೇನೆ. ಇದರಲ್ಲಿ ಪ್ರಮುಖವಾದದ್ದು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ನಿವಾರಿಸಿದ್ದಾಗಿದೆ. ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ಪ್ರಮುಖ ಘರ್ಷಣೆಯ ಅಂಚಿನಲ್ಲಿದ್ದಾಗ ಎರಡು ರಾಷ್ಟ್ರಗಳ ನಡುವೆ ಶಾಂತಿ ಒಪ್ಪಂದ ಮಾಡಿಸಿದ್ದಾಗಿ ಅವರು ಹೇಳಿದರು.

ಜೊತೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಲಕ್ಷಾಂತರ ಜೀವಗಳನ್ನು ಉಳಿಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಹೇಳಿರುವ ಟ್ರಂಪ್, ಆಪರೇಷನ್ ಸಿಂದೂರ್ ವೇಳೆ ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಪಾಕಿಸ್ತಾನ ಪರಮಾಣು ಬಾಂಬ್ ದಾಳಿ ನಡೆಸುವುದರಲ್ಲಿತ್ತು. ಆಗ ಪಾಕಿಸ್ತಾನದ ಪ್ರಧಾನಿ ಇಲ್ಲಿದ್ದರು. ಅವರೊಂದಿಗೆ ಮಾತನಾಡಿ 10 ಮಿಲಿಯನ್ ಗಿಂತಲೂ ಹೆಚ್ಚು ಜನರನ್ನು ಉಳಿಸಿದ್ದೇನೆ ಎಂದು ಅವರು ತಿಳಿಸಿದರು.

ನಾರ್ವೆಯ ನೊಬೆಲ್ ಪ್ರಶಸ್ತಿ ಸಮಿತಿ ಬಗ್ಗೆ ಮಾತನಾಡಿದ ಟ್ರಂಪ್, ಬಹುಮಾನದ ನಿರ್ಧಾರಗಳು ರಾಜಕೀಯ ಪ್ರಭಾವಿತವಾಗಿವೆ ಎಂದರು. ಅಲ್ಲದೇ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರು ತಮ್ಮ ಶಾಂತಿ ಪ್ರಶಸ್ತಿ ಪದಕವನ್ನು ತಮಗೆ ಹಸ್ತಾಂತರಿಸಿದ್ದಕ್ಕಾಗಿ ಅವರನ್ನು ಹೊಗಳಿದ ಟ್ರಂಪ್, ಅವರು ಇದಕ್ಕೆ ಹೆಚ್ಚು ಅರ್ಹರು ಎಂದು ನೊಬೆಲ್ ಪ್ರಶಸ್ತಿ ನಂಬಿತ್ತು ಎಂದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಳಿಸಿದ್ದು ತಾನು ಎಂದು ಅಮೆರಿಕ ಅಧ್ಯಕ್ಷರು ಹೇಳುತ್ತಿರುವುದು ಇದು ಮೊದಲೇನಲ್ಲ. ಯುದ್ಧ ಕೊನೆಗೊಂಡ ಬಳಿಕ ಹಲವು ಬಾರಿ ಟ್ರಂಪ್ ಇದನ್ನು ಹೇಳಿದ್ದಾರೆ. ಅಮೆರಿಕದ ರಾಜತಾಂತ್ರಿಕ ಒತ್ತಡ ಮತ್ತು ಸುಂಕದ ಬೆದರಿಕೆ ಸಂದರ್ಭದಲ್ಲೂ ಇದನ್ನು ಉಲ್ಲೇಖಿಸಿದ್ದರು.

Must Read