March 29, 2026
Sunday, March 29, 2026
spot_img

ಸಿಬಿಐ ಹೆಸರಲ್ಲಿ ಹೈಟೆಕ್ ದರೋಡೆ: 390 ಬ್ಯಾಂಕ್ ಖಾತೆಗಳಿಗೆ ಹರಿದು ಹೋದ ಕೋಟಿ ಕೋಟಿ ಹಣ!

ಹೊಸದಿಗಂತ ಬೆಳಗಾವಿ:

ಸೈಬರ್ ಲೋಕದ ಇತಿಹಾಸದಲ್ಲೇ ನಡುಕ ಹುಟ್ಟಿಸುವಂತಹ ವಂಚನೆಯೊಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ. ಸಿಬಿಐ ಅಧಿಕಾರಿಗಳೆಂದು ಸೋಗು ಹಾಕಿದ ವಂಚಕರ ತಂಡವೊಂದು, ನಗರದ ಹಿರಿಯ ಉದ್ಯಮಿಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡುವ ಮೂಲಕ ಬರೋಬ್ಬರಿ 15 ಕೋಟಿ 45 ಲಕ್ಷ ರೂಪಾಯಿ ಲೂಟಿ ಮಾಡಿದೆ.

ವಂಚಕರು ಉದ್ಯಮಿಗೆ ವಿಡಿಯೋ ಕಾಲ್ ಮಾಡಿ, “ನೀವು ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಜಾಲದಲ್ಲಿ ಸಿಲುಕಿದ್ದೀರಿ” ಎಂದು ಬೆದರಿಸಿದ್ದಾರೆ. ಸಿಬಿಐ ಸಮವಸ್ತ್ರದ ಮಾದರಿಯ ಬಟ್ಟೆ ಧರಿಸಿ, ಅಧಿಕೃತ ಕಚೇರಿಯಂತೆ ಸೆಟ್ ನಿರ್ಮಿಸಿಕೊಂಡಿದ್ದ ಖದೀಮರು, ಉದ್ಯಮಿಯನ್ನು ಗಂಟೆಗಟ್ಟಲೆ ವಿಡಿಯೋ ಕಾಲ್‌ನಲ್ಲಿ ಕಟ್ಟಿಹಾಕಿದ್ದರು. ಭಯಭೀತರಾದ ಉದ್ಯಮಿ, ಅವರು ಕೇಳಿದಷ್ಟು ಹಣವನ್ನು ವರ್ಗಾಯಿಸಿದ್ದಾರೆ.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರಿಗೆ ತನಿಖೆಯ ವೇಳೆ ದಿಗಿಲು ಹುಟ್ಟಿಸುವ ಮಾಹಿತಿ ಲಭ್ಯವಾಗಿದೆ. ಲೂಟಿ ಮಾಡಿದ 15 ಕೋಟಿ ಹಣವನ್ನು ಕೇವಲ ಕೆಲವೇ ನಿಮಿಷಗಳಲ್ಲಿ ದೇಶಾದ್ಯಂತ ಇರುವ ಸುಮಾರು 390 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಾಗಿ ನೂರಾರು ‘ಮ್ಯೂಲ್ ಅಕೌಂಟ್’ (ಬಾಡಿಗೆ ಖಾತೆ)ಗಳನ್ನು ಬಳಸಲಾಗಿದ್ದು, ಈಗಾಗಲೇ 95% ರಷ್ಟು ಹಣವನ್ನು ಡ್ರಾ ಮಾಡಲಾಗಿದೆ.

ಪ್ರಕರಣದ ವ್ಯಾಪ್ತಿ ದೊಡ್ಡದಿರುವುದರಿಂದ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಪತ್ರ ಬರೆಯಲಾಗಿದೆ. ಸದ್ಯಕ್ಕೆ ಪೊಲೀಸರು 90 ಲಕ್ಷ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಮೀಷನರ್ ಕಿವಿಮಾತು “ಕಾನೂನಿನಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬ ಯಾವುದೇ ಪದ್ಧತಿಯಿಲ್ಲ. ಪೊಲೀಸರಾಗಲಿ ಅಥವಾ ಸಿಬಿಐ ಅಧಿಕಾರಿಗಳಾಗಲಿ ಯಾರನ್ನೂ ವಿಡಿಯೋ ಕಾಲ್ ಮೂಲಕ ಬಂಧಿಸುವುದಿಲ್ಲ. ಇಂತಹ ಕರೆಗಳು ಬಂದರೆ ಭಯಪಡದೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ.”

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !