ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಭಾಗದ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಇನ್ನು ಮುಂದೆ ರಾಜ್ಯದ ಯಾವ ಮೂಲೆಯಲ್ಲಾದರೂ ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಮೌಖಿಕ ಆದೇಶ ಹೊರಡಿಸಿದೆ. ಈ ತೀರ್ಪಿನಿಂದ ಕಂಬಳ ಪ್ರೇಮಿಗಳು ಮತ್ತು ಅಭಿಮಾನಿಗಳಲ್ಲಿ ಹರ್ಷ ಉಂಟಾಗಿದೆ. ಶೀಘ್ರದಲ್ಲೇ ಈ ಕುರಿತು ವಿವರವಾದ ಆದೇಶ ಪ್ರಕಟವಾಗುವ ನಿರೀಕ್ಷೆಯಿದೆ.
PETA ಅರ್ಜಿಯಿಂದ ಎದುರಾಗಿದ್ದ ತೊಡಕು
ಕಂಬಳವನ್ನು ರಾಜ್ಯದ ಇತರೆಡೆಗಳಲ್ಲಿ ನಡೆಸಲು ಅಡ್ಡಿಯುಂಟಾಗಿತ್ತು. ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿದ್ದಾಗ, ಪ್ರಾಣಿ ಹಕ್ಕುಗಳ ಸಂಘಟನೆಯಾದ PETA (India’s Animal Rights Organisation) ನ್ಯಾಯಾಲಯದ ಮೊರೆ ಹೋಗಿತ್ತು. ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತದೆ, ಜೊತೆಗೆ ಅವುಗಳನ್ನು ವಾಹನಗಳಲ್ಲಿ ಕರೆದೊಯ್ಯುವುದರಿಂದ ಮತ್ತು ವಾತಾವರಣದ ಬದಲಾವಣೆಯಿಂದ ಅವುಗಳಿಗೆ ತೊಂದರೆಯಾಗುತ್ತದೆ ಎಂಬುದು PETA ದವರ ವಾದವಾಗಿತ್ತು. ಈ ಕಾರಣದಿಂದಾಗಿ, ಮೈಸೂರು ಮತ್ತು ಶಿವಮೊಗ್ಗದಂತಹ ಪ್ರದೇಶಗಳಲ್ಲಿ ಕಂಬಳ ಆಯೋಜನೆಗೆ ಅಡ್ಡಿಯಾಗಿತ್ತು.
‘ವಿಭಜಕ ಭಾವನೆ’ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್
ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, “ಕರಾವಳಿಯನ್ನು ಹೊರತುಪಡಿಸಿ ಕಂಬಳ ಆಯೋಜಿಸಬಾರದು ಎಂದರೆ ಅದು ವಿಭಜಕ ಭಾವನೆ ಆಗುತ್ತದೆ” ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ, ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ ಕಂಬಳ ಆಯೋಜಿಸಲು ಕಾನೂನು ನಿಯಮಗಳನ್ನು ರೂಪಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.
ಪಿಲಿಕುಳ ಕಂಬಳ ವಿಚಾರಣೆ ಮುಂದೂಡಿಕೆ
ಇದೇ ವೇಳೆ, ಮಂಗಳೂರಿನ ಪಿಲಿಕುಳದಲ್ಲಿ ಕಂಬಳ ಆಯೋಜಿಸಲು ಅನುಮತಿ ನೀಡಬಾರದು ಎಂದು PETA ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 11ಕ್ಕೆ ಮುಂದೂಡಿದೆ.