ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಹಂತ ಹಂತದಲ್ಲೂ ಅಡೆ ತಡೆ ಎದುರಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಕೆಎನ್ ಶಾಂತಕುಮಾರ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶಾಂತಕುಮಾರ್ ನಾಮಪತ್ರ ಸಿಂಧು ಎಂದಿದ್ದು ಮಾತ್ರವಲ್ಲ, ಡಿಸೆಂಬರ್ 7 ರಂದು ಚುನಾವಣೆ ನಡೆಸಲು ಸೂಚಿಸಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಕ್ರಿಕೆಟ್ ಸಂಸ್ಥೆ ಚುನಾವಣೆ ಮೇಲೆ ಕಾರ್ಮೋಡ ಹೆಚ್ಚಾಗಿತ್ತು. ಆದರೆ ಇಂದು ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ನಿಗದಿಯಂತೆ ಡಿಸೆಂಬರ್ 7ರಂದು ನಡೆಯಲಿದೆ. ಈ ಕುರಿತು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದೆ.ಕಲ್ಪನಾ ವೆಂಕಟಾಚಾರ್ ಅವರು ಮೇಲ್ಮನವಿ ಸಲ್ಲಿಸಲು ಬಾದಿತರಲ್ಲ. ನಾಮಪತ್ರ ಪರಿಶೀಲನೆಯ ವೇಳೆ ಹಿಂಬಾಕಿ ಪಾವತಿಸಲು ಅವಕಾಶವಿದೆ ಎಂದು ಹೈಕೋರ್ಟ್ ಹೇಳಿದೆ. ಹೀಗಾಗಿ ಕಲ್ಪನಾ ವೆಂಕಟಾಚಾರ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಲಾಗಿದೆ.
ಡಿಸೆಂಬರ್ 7ಕ್ಕೆ ಚುನಾವಣೆ, ತೀವ್ರಗೊಂಡ ಜಟಾಪಟಿ
ಡಿಸೆಂಬರ್ 7 ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ನಡೆಯಲಿದೆ. ಒಂದೆಡೆ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬೆಂಬಲದೊಂದಿದೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇತ್ತ ಮಾಜಿ ಕೆಎಸ್‌ಸಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಬೆಂಬಲದೊಂದಿಕೆ ಕೆಎನ್ ಶಾಂತಕುಮಾರ್ ಸ್ಪರ್ಧಿಸಿದ್ದಾರೆ. ಹೀಗಾಗಿ ತೀವ್ರ ಜಿದ್ದಾಜಿದ್ದಿ ಎರ್ಪಟ್ಟಿದೆ.

