ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಡ್ಯೂಡ್ ಚಿತ್ರದಲ್ಲಿ ಸಂಗೀತ ದಿಗ್ಗಜ ಇಳಯರಾಜ ಅವರ ಅನುಮತಿಯಿಲ್ಲದೆ ಹಳೆಯ ಚಿತ್ರಗಳ ಹಾಡುಗಳನ್ನು ಬಳಸಲಾಗಿದೆ ಎಂಬ ಆರೋಪದ ಮೇಲೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನಟ ಪ್ರದೀಪ್ ರಂಗನಾಥನ್ ಅಭಿನಯದ ಈ ಚಿತ್ರದಲ್ಲಿ ‘ಪುದು ನೆಲ್ಲು ಪುದು ನಾತು’ ಚಿತ್ರದ ‘ಕರುತ್ತ ಮಚ್ಚನ್’ ಮತ್ತು ‘ಪನಕಾರನ್’ ಚಿತ್ರದ ‘100 ವರುಷಂ ಇಂದ ಮಪ್ಪಿಲೈಕ್ಕು’ ಹಾಡುಗಳನ್ನು ಬಳಸಲಾಗಿದೆ ಎಂದು ಇಳಯರಾಜ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ನ್ಯಾಯಾಧೀಶ ಎನ್. ಸೆಂಥಿಲ್‌ಕುಮಾರ್ ಅವರ ಎದುರು ಇಳಯರಾಜ ಪರ ವಕೀಲರು, ಈ ಹಾಡುಗಳ ಕೃತಿಸ್ವಾಮ್ಯ ಹಕ್ಕು ಸಂಪೂರ್ಣವಾಗಿ ತಮ್ಮ ಕ್ಲೈಂಟ್‌ಗೆ ಸೇರಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ಮೈತ್ರಿ ಮೂವಿ ಮೇಕರ್ಸ್, ಈ ಹಾಡುಗಳ ಹಕ್ಕುಗಳು ಸೋನಿ ಕಂಪನಿಗೆ ಸೇರಿದ್ದು ಅವರ ಅನುಮತಿಯೊಂದಿಗೆ ಬಳಸಲಾಗಿದೆ ಎಂದು ಸ್ಪಷ್ಟಪಡಿಸಿತು.
ವಿಚಾರಣೆಯಲ್ಲಿ ಹೈಕೋರ್ಟ್, ಹಾಡುಗಳ ಪಾವಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಬಳಕೆ ನಡೆದಿದೆ ಎಂದು ಅಭಿಪ್ರಾಯಪಟ್ಟಿದ್ದು, ಚಿತ್ರದಲ್ಲಿನ ಇಳಯರಾಜ ಸಂಯೋಜಿತ ಹಾಡುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಿದೆ. ಇದಕ್ಕಾಗಿ 7 ದಿನಗಳ ಕಾಲಾವಕಾಶ ನೀಡಬೇಕು ಎಂಬ ನಿರ್ಮಾಪಕರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನಿರ್ಮಾಣ ಸಂಸ್ಥೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿದೆ.

