February 3, 2026
Tuesday, February 3, 2026
spot_img

ಬಜೆಟ್ ಅಧಿವೇಶನದಲ್ಲಿ ಹೈ-ಡ್ರಾಮಾ: ‘ಹೊರಗೆ ಹಾಕಿ’ ಎಂದ ಸಿಎಂ, ‘ಲೂಟಿ ಸರ್ಕಾರ’ ಎಂದ ವಿಪಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನಸಭೆಯಲ್ಲಿ ಇಂದು ‘ವಿಬಿ-ಜಿರಾಮ್‌ಜಿ’ ಕಾಯ್ದೆಯ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಕ್ಸಮರ ನಡೆಯಿತು. ಕೇಂದ್ರ ಸರ್ಕಾರದ ಈ ಕಾಯ್ದೆಯನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯ ಮಂಡಿಸಿದ ವೇಳೆ ಸದನವು ಗದ್ದಲದ ಗೂಡಾಗಿ ಪರಿಣಮಿಸಿತು.

ಸಿಎಂ ಸಿದ್ದರಾಮಯ್ಯ ಅವರು ನಿರ್ಣಯ ಓದುತ್ತಾ, “ಈ ಸದನವು ವಿಬಿ-ಜಿರಾಮ್‌ಜಿ ಕಾಯ್ದೆಯನ್ನು ಬಲವಾಗಿ ವಿರೋಧಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಕೂಡಲೇ ಇದನ್ನು ರದ್ದುಗೊಳಿಸಿ, ನರೇಗಾ ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲೇ ಮರು ಜಾರಿಗೊಳಿಸಬೇಕು. ನರೇಗಾ ಎನ್ನುವುದು ಸಂವಿಧಾನಬದ್ಧವಾದ ಕೆಲಸದ ಹಕ್ಕು ನೀಡುವ ಯೋಜನೆಯಾಗಿದೆ,” ಎಂದು ಕೇಂದ್ರಕ್ಕೆ ಒತ್ತಾಯಿಸಿದರು.

ಸಿಎಂ “ಈ ಸದನ ವಿರೋಧಿಸುತ್ತದೆ” ಎಂದಾಗ, ವಿಪಕ್ಷ ನಾಯಕ ಆರ್. ಅಶೋಕ್ ಆಕ್ಷೇಪವೆತ್ತಿ, “ಇದು ಸದನದ ನಿರ್ಣಯವಲ್ಲ, ನಿಮ್ಮ ಸರ್ಕಾರದ ನಿರ್ಣಯ ಎಂದು ಹೇಳಿ” ಎಂದು ತಿರುಗೇಟು ನೀಡಿದರು. ಆದರೆ ಸಿಎಂ ಸಿದ್ದರಾಮಯ್ಯ “ಈ ಸದನವೇ ವಿರೋಧಿಸುತ್ತದೆ” ಎಂದು ಒತ್ತಿ ಹೇಳುವ ಮೂಲಕ ವಿಪಕ್ಷಗಳಿಗೆ ಟಕ್ಕರ್ ನೀಡಿದರು.

ಇದನ್ನೂ ಓದಿ:

ವಿಪಕ್ಷಗಳ ನಿರಂತರ ಅಡ್ಡಿಯಿಂದ ಸಿಟ್ಟಾದ ಸಿಎಂ, “ಅಧ್ಯಕ್ಷರೇ, ಇವರನ್ನು ಸುಮ್ಮನೆ ಕೂರಿಸಿ, ಇಲ್ಲದಿದ್ದರೆ ಇವರನ್ನು ಸದನದಿಂದ ಹೊರಗೆ ಹಾಕಿ” ಎಂದು ಸ್ಪೀಕರ್ ಅವರಿಗೆ ಖಡಕ್ ಆಗಿ ಸೂಚಿಸಿದರು.

ವಿಪಕ್ಷಗಳು “ಲೂಟಿ ಸರ್ಕಾರ” ಎಂದು ಘೋಷಣೆ ಕೂಗುತ್ತಾ ಗದ್ದಲ ಮುಂದುವರಿಸಿದವು. ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಭೋಜನ ವಿರಾಮದವರೆಗೆ ಮುಂದೂಡಿದರು. ವಿರಾಮದ ನಂತರ ಕಲಾಪ ಪುನರಾರಂಭಗೊಂಡರೂ ಸಹ ಪರಿಸ್ಥಿತಿ ತಿಳಿಯಾಗದೆ ಜಟಾಪಟಿ ಮುಂದುವರೆಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !