ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಉಲ್ಬಣಗೊಂಡಿರುವ ನಾಯಕತ್ವ ಮತ್ತು ಕುರ್ಚಿ ಕಿತ್ತಾಟದ ಸಮಸ್ಯೆಗೆ ತೆರೆ ಎಳೆಯಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ದೆಹಲಿಯ ಇಂದಿರಾ ಕಾಂಗ್ರೆಸ್ ಭವನದಲ್ಲಿ ನಡೆಯಲಿರುವ ಹೈಕಮಾಂಡ್‌ನ ನಿರ್ಣಾಯಕ ಸಭೆಯ ಹಿನ್ನೆಲೆಯಲ್ಲಿ ಅವರು ರಾಜಧಾನಿಗೆ ತೆರಳಿದರು.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ ಅವರು, ಸಮಸ್ಯೆ ಇತ್ಯರ್ಥಪಡಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. “ದೆಹಲಿಗೆ ಹೋದ ಬಳಿಕ ಮೂರ್ನಾಲ್ಕು ಪ್ರಮುಖ ಜನರನ್ನು ಕರೆಸಿ ಮಾತಾಡುತ್ತೇನೆ. ಮುಂದೆ ಪಕ್ಷ ಹೇಗೆ ಸಾಗಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲರನ್ನೂ ಕರೆಸಿ ಹೈಕಮಾಂಡ್ ಎಲ್ಲವನ್ನೂ ಸೆಟಲ್ ಮಾಡುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ
ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಭಿನ್ನಮತವು ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಇದೆ ಬರುವ ಶನಿವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಸಭೆಯ ನಂತರ ಇನ್ನೆರಡು ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ಗೆ ಸಂಧಾನ ಸೂತ್ರ ಹೊರಬೀಳುವ ನಿರೀಕ್ಷೆಯಿದೆ.
“ನಾನು ಎಲ್ಲರನ್ನು ಕರೆಸಿ ಚರ್ಚೆ ಮಾಡುತ್ತೇನೆ. ರಾಹುಲ್ ಗಾಂಧಿ, ಸಿಎಂ ಮತ್ತು ಡಿಸಿಎಂ ಇಬ್ಬರೂ ಈ ಸಭೆಯಲ್ಲಿ ಇರುತ್ತಾರೆ. ಹೈಕಮಾಂಡ್ ಎಂದರೆ ಏಕಾಂಗಿ ನಿರ್ಧಾರವಲ್ಲ, ಅದು ಒಂದು ಟೀಮ್. ಆ ತಂಡ ಒಟ್ಟಿಗೆ ಕೂತು ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ,” ಎಂದು ಖರ್ಗೆ ಹೇಳಿದರು.
ಶನಿವಾರದ ಸಿಎಂ-ಡಿಸಿಎಂ ಮುಖಾಮುಖಿಗೂ ಮುನ್ನವೇ ಹೈಕಮಾಂಡ್‌ಗೆ ಎಲ್ಲಾ ವಿಷಯಗಳ ಬಗ್ಗೆ ಸ್ಪಷ್ಟತೆ ಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಸಭೆ ನಿರ್ಣಾಯಕ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.

