ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದ ಮಹಾನ್ ವೇದಿಕೆ ಈಗ ಸಜ್ಜಾಗಿದೆ. ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಕೋಟ್ಯಂತರ ಭಾರತೀಯರ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ.
ಭಾರತ ತಂಡ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಲು ತುಡಿಯುತ್ತಿದ್ದರೆ, ನ್ಯೂಜಿಲೆಂಡ್ ತನ್ನ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಯ ಕನಸಿನಲ್ಲಿದೆ. ಆದರೆ ಟೀಂ ಇಂಡಿಯಾ ಪಾಲಿಗೆ ಅಂಕಿಅಂಶಗಳು ಅಷ್ಟೊಂದು ಪೂರಕವಾಗಿಲ್ಲ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಈವರೆಗೆ ನ್ಯೂಜಿಲೆಂಡ್ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಹೀಗಾಗಿ ಅಜೇಯವಾಗಿ ಫೈನಲ್‌ಗೇರಿರುವ ಕಿವೀಸ್ ಪಡೆಯನ್ನು ಮಣಿಸುವುದು ಭಾರತಕ್ಕೆ ದೊಡ್ಡ ಸವಾಲಾಗಿದೆ.
ಸಂಜು ಸ್ಯಾಮ್ಸನ್ ಆರಂಭಿಕನಾಗಿ ಭರವಸೆ ಮೂಡಿಸಿದ್ದರೆ, ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ರನ್ ಮಳೆ ಹರಿಸುತ್ತಾ ಟೂರ್ನಿಯ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮಧ್ಯಮ ಕ್ರಮಾಂಕಕ್ಕೆ ಆಸರೆಯಾಗಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಸರ್ ಪಟೇಲ್ ಆಲ್‌ರೌಂಡ್ ಪ್ರದರ್ಶನದ ಮೂಲಕ ತಂಡಕ್ಕೆ ಸಮತೋಲನ ನೀಡುತ್ತಿದ್ದಾರೆ.
ಜಸ್ಪ್ರೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್ ಅವರ ವೇಗದ ದಾಳಿ ತಂಡಕ್ಕೆ ವರದಾನವಾಗಿದೆ. ಸಂದಿಗ್ಧ ಸಂದರ್ಭಗಳಲ್ಲಿ ವಿಕೆಟ್ ಪಡೆಯುವ ಈ ಜೋಡಿಯ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.
ಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ ‘ಪ್ಲೇಯಿಂಗ್ 11’:
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಶ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.



