Tuesday, October 21, 2025

RCB ತಂಡದಲ್ಲಿ ಬದಲಾವಣೆಯ ಸುಳಿವು: ಯಾರಿಗೆ ರೀಟೈನ್, ಯಾರಿಗೆ ರಿಲೀಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರಲ್ಲಿ 17 ವರ್ಷಗಳ ಕನಸನ್ನು ನನಸಾಗಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇದೀಗ 2026ರ ಐಪಿಎಲ್ ಮಿನಿ ಹರಾಜಿನತ್ತ ಕಣ್ಣಿಟ್ಟಿದೆ. ಚಾಂಪಿಯನ್ ಪಟ್ಟ ಗೆದ್ದ ಬಳಿಕ ತಂಡದಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ ಎಂದು ಫ್ರಾಂಚೈಸಿ ನಿರ್ಧರಿಸಿದ್ದು, ಕೆಲ ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಕೆಲ ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರವೂ ಕೈಗೊಳ್ಳಲಾಗಿದೆ.

ಆರ್‌ಸಿಬಿ ಮೇನ್ ಪಿಲ್ಲರ್ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್, ವಿಕೆಟ್‌ಕೀಪರ್ ಫಿಲ್ ಸಾಲ್ಟ್, ಬ್ಯಾಟರ್ ಜಿತೇಶ್ ಶರ್ಮಾ ಮತ್ತು ಆಲ್‌ರೌಂಡರ್ ಕೃನಾಲ್ ಪಾಂಡ್ಯರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಖಚಿತವಾಗಿದೆ. ಇದರ ಜೊತೆಗೆ ಸ್ವಸ್ತಿಕ್ ಚಿಕಾರಾ, ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಹಾಗೂ ಮಯಾಂಕ್ ಅಗರ್‌ವಾಲ್‌ರನ್ನು ಸಹ ಉಳಿಸಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ.

ಇದಕ್ಕೆ ವಿರುದ್ಧವಾಗಿ, ಕಳೆದ ಸೀಸನ್‌ನಲ್ಲಿ ನಿರಾಶೆಗೊಳಿಸಿದ ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಬ್ಲೆಸಿಂಗ್ ಮುಜರಬಾನಿ, ರಸಿಖ್ ದಾರ್ ಮತ್ತು ನುವಾನ್ ತುಷಾರರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆ ಗಟ್ಟಿಯಾಗಿದೆಯೆಂದು ಮೂಲಗಳು ತಿಳಿಸಿವೆ. ಲಿವಿಂಗ್‌ಸ್ಟೋನ್ 8.75 ಕೋಟಿಗೆ ಖರೀದಿಯಾಗಿದ್ದರೂ ಕೇವಲ 10 ಪಂದ್ಯಗಳಲ್ಲಿ 112 ರನ್ ಗಳಿಸುವಲ್ಲಿ ವಿಫಲರಾದರು. ರಸಿಖ್ ದಾರ್ ಕೂಡ ಬೌಲಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಮುಂದಿನ ಹರಾಜಿಗೆ ಆರ್‌ಸಿಬಿ ಸುಮಾರು 15 ರಿಂದ 18 ಕೋಟಿಯ ಪರ್ಸ್‌ನೊಂದಿಗೆ ಪ್ರವೇಶಿಸುವ ನಿರೀಕ್ಷೆ ಇದೆ. ತಂಡವು ತನ್ನ ದುರ್ಬಲ ವಿಭಾಗಗಳನ್ನು ಬಲಪಡಿಸಲು ಮುಂದಾಗಿದ್ದು, ಹೊಸ ಆಟಗಾರರ ಖರೀದಿ ಮೂಲಕ ಸಮತೋಲನ ಸಾಧಿಸಲು ಯೋಚಿಸುತ್ತಿದೆ.

error: Content is protected !!