ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಕರಗ ಸಂಭ್ರಮ ಆರಂಭವಾಗಿದೆ. ಕಾಲ ಎಷ್ಟೇ ಮುಂದುವರಿದಿದ್ದರೂ ಸಾಂಪ್ರದಾಯಕವಾಗಿ ನಡೆಯುವ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ ದೊರೆಯಲಿದೆ.
ಪ್ರಧಾನ ಅರ್ಚಕರಾದ ವಿ. ಜ್ಞಾನೇಂದ್ರ ಅವರು ಈ ಬಾರಿಯೂ ಕರಗ ಹೊರುವ ಮೂಲಕ ಉತ್ಸವ ಆರಂಭಿಸಲಿದ್ದಾರೆ. ಇಂದಿನಿಂದ ಏಪ್ರಿಲ್ 3ರವರೆಗೆ ಪ್ರತಿದಿನ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ನಿಗದಿತ ಕೆರೆ ಪ್ರದೇಶಗಳಲ್ಲಿ ಗಂಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.
ಕರಗ ಉತ್ಸವದ ಪ್ರಮುಖ ಆಕರ್ಷಣೆಯಾದ ‘ಕರಗ ಶಕ್ತ್ಯುತ್ಸವ’ ಏಪ್ರಿಲ್ 1ರ ಮಧ್ಯರಾತ್ರಿ ಅದ್ಧೂರಿಯಾಗಿ ಜರುಗಲಿದೆ. ಇನ್ನು ಕರಗಕ್ಕೆ ಬಿಡಿ ಹೂವುಗಳನ್ನು ಪೋಣಿಸಿ ವಿಶೇಷ ಅಲಂಕಾರ ಮಾಡಲಾಗುತ್ತದೆ.
ದಸರಾ ಮಹೋತ್ಸವದ ಮಾದರಿಯಲ್ಲಿ ದೇವಸ್ಥಾನದ ಒಳಗೆ ಮತ್ತು ಹೊರಗೆ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಹಡ್ಸನ್ ಸರ್ಕಲ್, ಟೌನ್ ಹಾಲ್ ವೃತ್ತ, ಸಿಟಿ ಮಾರುಕಟ್ಟೆ, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ವೃತ್ತ ಸೇರಿದಂತೆ ಹಳೇ ಪೇಟೆಗಳ ಪ್ರಮುಖ ರಸ್ತೆಗಳಲ್ಲಿ ಭವ್ಯವಾದ ದೀಪಾಲಂಕಾರ ಮಾಡಲಾಗಿದೆ.



