ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟಗಳ ಮೇಲೆ ನೆಲೆಸಿರುವ ಶ್ರೀಶೈಲಂ, ಭೌತಿಕವಾಗಿ ಎಷ್ಟು ಸುಂದರವೋ ಪೌರಾಣಿಕವಾಗಿ ಅಷ್ಟೇ ಅದ್ಭುತವಾಗಿದೆ.

ಪುರಾಣಗಳ ಪ್ರಕಾರ, ಒಮ್ಮೆ ಶಿವ ಮತ್ತು ಪಾರ್ವತಿ ತಮ್ಮ ಮಕ್ಕಳಾದ ಗಣೇಶ ಮತ್ತು ಸುಬ್ರಹ್ಮಣ್ಯನಿಗೆ ಒಂದು ಪಂದ್ಯ ಏರ್ಪಡಿಸುತ್ತಾರೆ. “ಯಾರು ಮೊದಲು ಭೂಪ್ರದಕ್ಷಿಣೆ ಮಾಡಿ ಬರುತ್ತಾರೋ ಅವರಿಗೆ ಮೊದಲು ವಿವಾಹ” ಎಂಬ ಶರತ್ತು ವಿಧಿಸುತ್ತಾರೆ. ಸುಬ್ರಹ್ಮಣ್ಯ ತನ್ನ ನವಿಲನ್ನೇರಿ ಲೋಕ ಸುತ್ತಲು ಹೋದರೆ, ಗಣೇಶ ತನ್ನ ಹೆತ್ತವರೇ ಲೋಕವೆಂದು ಅವರಿಗೆ ಪ್ರದಕ್ಷಿಣೆ ಹಾಕಿ ಪಂದ್ಯ ಗೆಲ್ಲುತ್ತಾನೆ.

ಇದರಿಂದ ಮುನಿಸಿಕೊಂಡ ಸುಬ್ರಹ್ಮಣ್ಯ (ಕಾರ್ತಿಕೇಯ) ಕೈಲಾಸ ಬಿಟ್ಟು ದಕ್ಷಿಣದ ಕ್ರೌಂಚ ಗಿರಿಗೆ ಬಂದು ನೆಲೆಸುತ್ತಾನೆ. ಮಗನನ್ನು ಸಮಾಧಾನಪಡಿಸಲು ಶಿವ ಮತ್ತು ಪಾರ್ವತಿ ಇಲ್ಲಿಗೆ ಬರುತ್ತಾರೆ. ಶಿವನು ಮಲ್ಲಿಕಾರ್ಜುನನಾಗಿ (ಜ್ಯೋತಿರ್ಲಿಂಗ), ಪಾರ್ವತಿಯು ಭ್ರಮರಾಂಬೆಯಾಗಿ (ಶಕ್ತಿಪೀಠ) ಇಲ್ಲಿ ನೆಲೆ ನಿಲ್ಲುತ್ತಾರೆ ಎಂಬುದು ವಾಡಿಕೆ.
ಶ್ರೀಶೈಲಂ ಕೇವಲ ಪುರಾಣವಲ್ಲ, ಇತಿಹಾಸದ ಪುಟಗಳಲ್ಲೂ ಅಮರವಾಗಿದೆ:

2ನೇ ಶತಮಾನದ ಶಾತವಾಹನರ ಕಾಲದಿಂದಲೂ ಈ ದೇವಾಲಯದ ಉಲ್ಲೇಖಗಳಿವೆ. ಪಲ್ಲವರು, ಚಾಲುಕ್ಯರು, ಕಾಕತೀಯರು ಮತ್ತು ರೆಡ್ಡಿ ರಾಜರು ಈ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಶಿವಾಜಿ ಮಹಾರಾಜರು ಇಲ್ಲಿಗೆ ಭೇಟಿ ನೀಡಿ, ದೇವಸ್ಥಾನದ ಉತ್ತರ ಗೋಪುರವನ್ನು ನಿರ್ಮಿಸಿದರು ಎನ್ನಲಾಗುತ್ತದೆ.
ಕನ್ನಡದ ಶರಣರಾದ ಅಕ್ಕಮಹಾದೇವಿ ತನ್ನ ಆರಾಧ್ಯ ದೈವ ‘ಚೆನ್ನಮಲ್ಲಿಕಾರ್ಜುನ’ನನ್ನು ಅರಸುತ್ತಾ ಬಂದು ಇಲ್ಲಿನ ಕದಳಿ ವನದಲ್ಲಿ ಐಕ್ಯರಾದರು ಎಂಬುದು ಕನ್ನಡಿಗರಿಗೆ ಈ ಕ್ಷೇತ್ರದ ಮೇಲಿರುವ ವಿಶೇಷ ಭಕ್ತಿ.
ಈ ಕ್ಷೇತ್ರದ ವಿಶೇಷತೆಗಳೇನು?
ಭಾರತದಲ್ಲಿ ಜ್ಯೋತಿರ್ಲಿಂಗ ಮತ್ತು ಶಕ್ತಿಪೀಠ ಎರಡೂ ಒಂದೇ ಆವರಣದಲ್ಲಿರುವ ಏಕೈಕ ದಿವ್ಯ ಕ್ಷೇತ್ರವಿದು. ಕೃಷ್ಣಾ ನದಿಯು ಇಲ್ಲಿ ಪಾತಳ ಗಂಗೆಯಾಗಿ ಹರಿಯುತ್ತದೆ. ಇಲ್ಲಿ ಸ್ನಾನ ಮಾಡುವುದು ಪುಣ್ಯದ ಕೆಲಸವೆಂದು ಭಕ್ತರು ಭಾವಿಸುತ್ತಾರೆ.
ಶ್ರೀಶೈಲದ ಪರ್ವತ ಶಿಖರವನ್ನು ದೂರದಿಂದ ನೋಡಿದರೆ ಪುನರ್ಜನ್ಮವಿಲ್ಲ ಎಂಬ ನಂಬಿಕೆಯಿದೆ.



