January15, 2026
Thursday, January 15, 2026
spot_img

ಧರ್ಮಶಾಲಾದಲ್ಲಿ ಇತಿಹಾಸ: 100/1000 ‘ಡಬಲ್ ಕ್ಲಬ್’ ಸೇರಿದ ವಿಶ್ವದ 5ನೇ ಆಟಗಾರ ಹಾರ್ದಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಧರ್ಮಶಾಲಾದಲ್ಲಿ ನಡೆದ ಮೂರನೇ T20 ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಗೆಲುವು ಸರಣಿ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಅಪೂರ್ವ ಮೈಲಿಗಲ್ಲನ್ನು ಸ್ಥಾಪಿಸಿ ಇತಿಹಾಸ ನಿರ್ಮಿಸಿದ್ದಾರೆ.

ಪಂದ್ಯದಲ್ಲಿ ಪಾಂಡ್ಯ ಅವರು ಮೂರು ಓವರ್‌ಗಳನ್ನು ಎಸೆದು ಕೇವಲ 23 ರನ್‌ಗಳನ್ನು ನೀಡಿ ಒಂದು ವಿಕೆಟ್ ಕಬಳಿಸಿದರು. ಈ ಒಂದು ವಿಕೆಟ್ ಮೂಲಕ, ಅವರು T20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಸಾಧನೆಯನ್ನು ಪೂರ್ಣಗೊಳಿಸಿದರು.

ಈ ಸಾಧನೆಯೊಂದಿಗೆ, ಹಾರ್ದಿಕ್ ಪಾಂಡ್ಯ ಅವರು T20 ಅಂತರರಾಷ್ಟ್ರೀಯ ಇತಿಹಾಸದಲ್ಲಿ 100 ವಿಕೆಟ್‌ಗಳು ಮತ್ತು 1000 ರನ್‌ಗಳನ್ನು ಕಲೆಹಾಕಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದು ಟೀಮ್ ಇಂಡಿಯಾ ಪರ ದಾಖಲಾದ ಒಂದು ವಿಶಿಷ್ಟವಾದ ಸಾಧನೆಯಾಗಿದೆ.

ವಿಶ್ವದ 5ನೇ ಆಟಗಾರ:
ಪಾಂಡ್ಯ ಅವರು ಈ ಪ್ರತಿಷ್ಠಿತ ‘100 ವಿಕೆಟ್ ಮತ್ತು 1000 ರನ್’ ಕ್ಲಬ್ ಸೇರಿ ವಿಶ್ವದ 5ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಪಾಂಡ್ಯಗೂ ಮುನ್ನ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಝಿಂಬಾಬ್ವೆಯ ಸಿಕಂದರ್ ರಾಝ, ಮತ್ತು ಮಲೇಷ್ಯಾದ ವೀರನ್ ದೀಪ್ ಸಿಂಗ್ ಮಾತ್ರ ಈ ಸಾಧನೆ ಮಾಡಿದ್ದರು.

ಇದುವರೆಗೆ 123 T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಹಾರ್ದಿಕ್ ಪಾಂಡ್ಯ, ಪ್ರಸ್ತುತ 100 ವಿಕೆಟ್‌ಗಳೊಂದಿಗೆ 1939 ರನ್‌ಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶಗಳೊಂದಿಗೆ, ಅವರು ಭಾರತೀಯ ಕ್ರಿಕೆಟ್‌ನ ಏಕೈಕ ಆಲ್-ರೌಂಡರ್ ಆಗಿ ಮಿಂಚಿದ್ದಾರೆ.

Most Read

error: Content is protected !!