ಹೊಸದಿಗಂತ ಡಿಜಿಟಲ್ ಡೆಸ್ಕ್:
ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ತಂಡವು ಸಿಕ್ಕಿಂ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಸುಲಭವಾಗಿ ಗುರಿ ತಲುಪಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸಿಕ್ಕಿಂ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಶಿಶ್ ಥಾಪಾ (79 ರನ್) ಆಸರೆಯಾದರು. ಇವರ ಅರ್ಧಶತಕದ ನೆರವಿನಿಂದ ಸಿಕ್ಕಿಂ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿತು.
237 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಹಿಟ್ಮ್ಯಾನ್, ಒಟ್ಟು 94 ಎಸೆತಗಳಲ್ಲಿ 155 ರನ್ (18 ಫೋರ್, 9 ಸಿಕ್ಸ್) ಚಚ್ಚಿದರು.
ಈ ಸ್ಫೋಟಕ ಆಟದ ನೆರವಿನಿಂದ ಮುಂಬೈ ತಂಡವು ಕೇವಲ 30.3 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು.

