ಇಂದಿನ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ನೀರಿನ ಕೊರತೆಯಿಂದ ಮೂತ್ರಪಿಂಡದ ಕಲ್ಲುಗಳು (Kidney Stones) ಹೆಚ್ಚುತ್ತಿವೆ. ಸಾಮಾನ್ಯವಾಗಿ ಈ ಸಮಸ್ಯೆ ಪುರುಷರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಹತ್ತು ಮಂದಿಯಲ್ಲಿ ಕನಿಷ್ಠ ಒಬ್ಬರಿಗೆ ಜೀವನದ ಯಾವದೋ ಹಂತದಲ್ಲಿ ಈ ತೊಂದರೆ ಎದುರಾಗಬಹುದು.
ತಜ್ಞರ ಪ್ರಕಾರ, ಕೆಲವು ಮನೆಮದ್ದುಗಳು ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಹಾಗೂ ಅವುಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ. ತೆಂಗಿನ ನೀರು ಕುಡಿಯುವುದರಿಂದ ದೇಹಕ್ಕೆ ತಾಜಾತನ ನೀಡುವುದಷ್ಟೇ ಅಲ್ಲ, ಮೂತ್ರವರ್ಧಕ ಗುಣಲಕ್ಷಣಗಳಿಂದ ಕಲ್ಲುಗಳನ್ನು ಹೊರಹಾಕುವಲ್ಲಿ ಸಹ ಸಹಾಯ ಮಾಡುತ್ತದೆ. ಅದೇ ರೀತಿ ತೆಂಗಿನ ಹೂವಿನ ಪೇಸ್ಟ್ ಅನ್ನು ಮೊಸರಿನೊಂದಿಗೆ ಬೆರೆಸಿ ಸೇವಿಸುವುದು ಸಹ ಪ್ರಯೋಜನಕಾರಿ ಎಂದು ತಿಳಿಸಲಾಗಿದೆ.
ಮೂತ್ರಪಿಂಡದ ಆರೋಗ್ಯಕ್ಕಾಗಿ ಹಸಿರು ಚಹಾ ಉಪಯುಕ್ತವಾಗಿದೆ. ಇದು ಕ್ಯಾಲ್ಸಿಯಂ ಶೇಖರಣೆಯನ್ನು ಕಡಿಮೆ ಮಾಡುವುದರೊಂದಿಗೆ ಮೂತ್ರದಲ್ಲಿನ ಆಕ್ಸಲೇಟ್ ಮಟ್ಟವನ್ನು ತಗ್ಗಿಸುತ್ತದೆ. ಹೀಗಾಗಿ ಕಲ್ಲುಗಳ ಬೆಳವಣಿಗೆಗೆ ತಡೆಯೊಡ್ಡಬಹುದು.
ಅದೇ ರೀತಿ ದಾಳಿಂಬೆ ರಸ ಸೇವನೆ ದೇಹದ ನೀರಿನ ಕೊರತೆಯನ್ನು ತಡೆಯುವ ಜೊತೆಗೆ ನೈಸರ್ಗಿಕವಾಗಿ ಮೂತ್ರಪಿಂಡದ ಕಲ್ಲು ನಿವಾರಣೆಗೆ ನೆರವಾಗುತ್ತದೆ.