ಗೊರಕೆ ಹೊಡೆಯುವುದು ಸಾಮಾನ್ಯ ಸಮಸ್ಯೆಯಾದರೂ ಅದು ವ್ಯಕ್ತಿಯ ಜೊತೆಗೆ ಮಲಗುವವರಿಗೂ ತೊಂದರೆ ಉಂಟುಮಾಡುತ್ತದೆ. ದಿನವಿಡೀ ದುಡಿದು ಮನೆಗೆ ಬಂದು ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಬೇಕಾದರೆ ಗೊರಕೆಯ ಶಬ್ದ ನಿದ್ರೆಗೆ ಅಡ್ಡಿಯಾಗುತ್ತದೆ. ಇದು ಕೆಲವೊಮ್ಮೆ ದಾಂಪತ್ಯ ಜೀವನಕ್ಕೂ ಸಮಸ್ಯೆ ತರುತ್ತದೆ. ಗೊರಕೆ ನಿಯಂತ್ರಣಕ್ಕೆ ವೈದ್ಯಕೀಯ ಚಿಕಿತ್ಸೆಗಳಿದ್ದರೂ, ಮನೆಯಲ್ಲಿಯೇ ಪ್ರಯೋಗಿಸಬಹುದಾದ ನೈಸರ್ಗಿಕ ಮನೆಮದ್ದುಗಳೂ ಇವೆ. ಇವು ದೇಹಕ್ಕೆ ಯಾವುದೇ ಹಾನಿ ಮಾಡದೇ ಗಂಟಲನ್ನು ಮೃದುಗೊಳಿಸಿ, ನಿದ್ರೆಗೆ ತೊಂದರೆ ಇಲ್ಲದೆ ಗೊರಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ.
ಶುಂಠಿ ಮತ್ತು ಜೇನುತುಪ್ಪ – ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ ಗಂಟಲನ್ನು ತಂಪಾಗಿಸಿ ಮೃದುಗೊಳಿಸುತ್ತದೆ. ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಗೊರಕೆ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆ ಮತ್ತು ಜೇನುತುಪ್ಪ – ರಾತ್ರಿ ಮಲಗುವ ಮುನ್ನ ಅರ್ಧ ಚಮಚ ಆಲಿವ್ ಎಣ್ಣೆಗೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲಿನ ಕಂಪನ ಕಡಿಮೆಯಾಗಿ ಗೊರಕೆಗೆ ಪರಿಹಾರ ದೊರೆಯುತ್ತದೆ.

ಬಿಸಿನೀರಿನ ಹಬೆ – ಮಲಗುವ ಮುನ್ನ ಬಿಸಿನೀರಿನಲ್ಲಿ ಹಬೆ ತೆಗೆದುಕೊಳ್ಳುವುದು ಗಂಟಲು ಮತ್ತು ಶ್ವಾಸಕೋಶಕ್ಕೆ ವಿಶ್ರಾಂತಿ ನೀಡುತ್ತದೆ, ಇದರಿಂದ ಗೊರಕೆ ನಿಯಂತ್ರಣವಾಗುತ್ತದೆ.

ಏಲಕ್ಕಿ ನೀರು – ಒಂದು ಲೋಟ ಬೆಚ್ಚಗಿನ ನೀರಿಗೆ ಒಂದೂವರೆ ಟೀ ಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಮಲಗುವ ಮುನ್ನ ಕುಡಿಯುವುದರಿಂದ ಉಸಿರಾಟದ ದಾರಿಗಳು ಸ್ವಚ್ಛವಾಗಿ ಗೊರಕೆ ತಗ್ಗುತ್ತದೆ.

ಬೆಳ್ಳುಳ್ಳಿ ಮತ್ತು ಲವಂಗ – ಸಾಮಾನ್ಯ ಶೀತದಿಂದಾಗಿ ಗೊರಕೆ ಉಂಟಾದರೆ ಹಸಿ ಬೆಳ್ಳುಳ್ಳಿ ಹಾಗೂ ಲವಂಗವನ್ನು ಅಗಿದು ಒಂದು ಲೋಟ ನೀರಿನೊಂದಿಗೆ ಕುಡಿಯುವುದು ಉತ್ತಮ.

ಮದ್ಯಪಾನ ಮತ್ತು ತಂಬಾಕು ತ್ಯಜಿಸಿ – ಆಲ್ಕೊಹಾಲ್ ಮತ್ತು ತಂಬಾಕು ಗಂಟಲಿನ ಸ್ನಾಯುಗಳನ್ನು ದುರ್ಬಲಗೊಳಿಸಿ ಗೊರಕೆಯನ್ನು ಹೆಚ್ಚಿಸುತ್ತವೆ. ಹೀಗಾಗಿ ಅವನ್ನು ತ್ಯಜಿಸುವುದು ಅಥವಾ ಕಡಿಮೆ ಮಾಡುವುದು ಅಗತ್ಯ.