ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿಯ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಆ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ. ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು, ತಂದೆ ಹಾಗೂ ಕುಟುಂಬಸ್ಥರು ಸೇರಿ ಕೊಲೆ ಮಾಡಿ ನಂತರ ಸುಟ್ಟು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಗ್ರಾಮದಲ್ಲಿ ಭಾರೀ ಉದ್ವಿಗ್ನತೆ ಉಂಟುಮಾಡಿದ್ದು, ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪಡೆ ನಿಯೋಜಿಸಿದ್ದಾರೆ.
ಕೊಲೆಯಾದ ಯುವತಿಯನ್ನು ಕವಿತಾ ಕೊಳ್ಳೂರ (18) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಶಂಕರ ಕೊಳ್ಳೂರ ಹಾಗೂ ಸಂಬಂಧಿಗಳಾದ ಶರಣು ಮತ್ತು ದತ್ತು ಚೋಳಾಭರ್ಧಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಫರಹತಾಬಾದ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕವಿತಾ ಪಿಯುಸಿ ಓದಲು ಕಲಬುರಗಿಗೆ ಬಂದಿದ್ದ ವೇಳೆ ಗ್ರಾಮದ ಅನ್ಯಜಾತಿಯ ಯುವಕನೊಂದಿಗೆ ಪರಿಚಯ ಬೆಳೆಸಿಕೊಂಡು ಪ್ರೀತಿಸತೊಡಗಿದ್ದಳು. ಪ್ರೀತಿ ವಿಚಾರ ಮನೆಯಲ್ಲಿ ಬಹಿರಂಗವಾದ ಬಳಿಕ, ಕುಟುಂಬಸ್ಥರು ಆಕೆಯನ್ನು ಕಾಲೇಜಿನಿಂದ ಕರೆಸಿ ಮನೆಯಲ್ಲೇ ಇರಿಸಿಕೊಂಡಿದ್ದರು. ಆದರೆ ಅವನನ್ನೇ ಮದುವೆ ಮಾಡಿಕೊಳ್ಳಬೇಕು ಎಂದು ಕವಿತಾ ಪಟ್ಟು ಹಿಡಿದಿದ್ದರಿಂದ ಕುಟುಂಬದಲ್ಲಿ ಗಲಾಟೆ ಉಂಟಾಗಿತ್ತು.
ಇದರಿಂದಲೇ ಆಕ್ರೋಶಗೊಂಡ ಮನೆಯವರು ಮಧ್ಯರಾತ್ರಿ ಕವಿತಾಳ ಕತ್ತು ಹಿಸುಕುವ ಮೂಲಕ ಹತ್ಯೆ ನಡೆಸಿದರೆಂದು ಆರೋಪಿಸಲಾಗಿದೆ. ಬಳಿಕ ಕೀಟನಾಶಕ ಸುರಿದು ಆತ್ಮಹತ್ಯೆ ಮಾಡಿಕೊಂಡಂತೆ ತೋರಿಸಲು ಯತ್ನಿಸಿದರು. ಬೆಳಗಿನ ವೇಳೆ ದೇಹವನ್ನು ಗ್ರಾಮದ ಹೊರವಲಯದ ಜಮೀನಿಗೆ ಕೊಂಡೊಯ್ದು ಸುಟ್ಟಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಮೂಳೆ ಅವಶೇಷಗಳನ್ನು ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಂಡಿದ್ದಾರೆ.