ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ನಡೆದಿದೆ. 2023ರ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದು ಸಂಚಲನ ಮೂಡಿಸಿದ್ದ ಹೂಡಿ ವಿಜಯ್ ಕುಮಾರ್, ಇಂದು ಅಧಿಕೃತವಾಗಿ ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಹೂಡಿ ವಿಜಯ್ ಕುಮಾರ್ ಪಕ್ಷದ ಬಾವುಟ ಹಿಡಿದರು. ಕಳೆದ ಚುನಾವಣೆಯಲ್ಲಿ ‘ಮಾಲೂರು ಸ್ವಾಭಿಮಾನಿ ಜನತಾ ಪಕ್ಷ’ದ ಅಡಿಯಲ್ಲಿ ಸ್ಪರ್ಧಿಸಿ ಭಾರಿ ಮತಬೇಟೆ ನಡೆಸಿದ್ದ ವಿಜಯ್ ಕುಮಾರ್, ಈಗ ಜೆಡಿಎಸ್ ಮೂಲಕ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
ವಿಜಯ್ ಕುಮಾರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ವಿಜಯ್ ಕುಮಾರ್ ಅವರೊಂದಿಗೆ ನಾನು ಸದಾ ಸಂಪರ್ಕದಲ್ಲಿದ್ದೆ. ರಾಜಕೀಯದಲ್ಲಿ ಆತುರದ ನಿರ್ಧಾರಗಳು ಭವಿಷ್ಯಕ್ಕೆ ಧಕ್ಕೆ ತರುತ್ತವೆ ಎಂದು ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಮಾಲೂರು ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಪಕ್ಷ ಸಂಘಟನೆಗಾಗಿ ನಾವು ಕೈಜೋಡಿಸಿದ್ದೇವೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.



