ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಭಟನೆ ಕೇಳಿದ್ದೇನೆ ಆದರೆ ಸ್ವತಃ ಯಾವುದೇ ಪ್ರತಿಭಟನೆ ನೋಡಿಲ್ಲ. ಇದು ಹಾರಿಬಲ್, ಮನೆಮಂದಿಯನ್ನು ಸಂಪರ್ಕಿಸೋಣವೆಂದರೆ ಇಂಟರ್ನೆಟ್ ಕೂಡಾ ಇಲ್ಲ, ಕ್ಷಣ ಕ್ಷಣವೂ ಆತಂಕವಷ್ಟೇ ನಮ್ಮ ಸಾಥಿಯಾಗಿತ್ತು….
ಇದು ಇರಾನ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ನಡುವೆ ಸುರಕ್ಷಿತವಾಗಿ ವಿಮಾನದ ಮೂಲಕ ದಿಲ್ಲಿಗೆ ಬಂದಿಳಿದ ಭಾರತೀಯರೊಬ್ಬರ ಮನದಾಳದ ಮಾತು.
ಖಮೇನಿ ಆಡಳಿತದ ವಿರುದ್ಧ ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ನಂತರ ಇರಾನ್‌ನಿಂದ ಭಾರತೀಯರನ್ನು ಹೊತ್ತ ಮೊದಲ ಎರಡು ವಾಣಿಜ್ಯ ವಿಮಾನಗಳು ಕಳೆದ ರಾತ್ರಿ ದೆಹಲಿಗೆ ಬಂದಿಳಿದಿವೆ. ಈ ಹಿಂದೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇರಾನ್ ವಾಯುಪ್ರದೇಶವನ್ನು ಸ್ವಲ್ಪ ಸಮಯದವರೆಗೂ ಮುಚ್ಚಿದ್ದರಿಂದ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿತು. ಇರಾನ್‌ನಲ್ಲಿ ವಾಯು ಸಂಚಾರ ಪುನರಾರಂಭವಾಗಿದ್ದು, ಅಲ್ಲಿನ ಹಲವಾರು ಭಾರತೀಯರು ತಾಯ್ನೆಲಕ್ಕೆ ಹಿಂದಿರುಗುತ್ತಿದ್ದಾರೆ.
ನಾವು ಹೊರಟ ಸಂದರ್ಭ ಪ್ರತಿಭಟನಾಕಾರರು ನಮ್ಮ ಕಾರಿನ ಮುಂದೆ ಬಂದು ಒಂದಿಷ್ಟು ತೊಂದರೆ ಕೊಟ್ಟಿದ್ದರು. ಇಂಟರ್ನೆಟ್ ಇಲ್ಲವಾದ ಕಾರಣ ನಾವು ರಾಯಭಾರ ಕಚೇರಿಯನ್ನು ಸಂಪರ್ಕಿಸುವುದೂ ಸಾಧ್ಯವಾಗಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ಟೆಹ್ರಾನ್‌ನಲ್ಲಿನ ಪರಿಸ್ಥಿತಿ ಈಗ ಸಾಮಾನ್ಯವಾಗಿದೆ ಎಂದು ಇಲ್ಲಿಗೆ ಆಗಮಿಸಿದವರು ಅಲ್ಲಿನ ಚಿತ್ರಣ ಬಿಚ್ಚಿಟ್ಟಿದ್ದಾರೆ.
ಅಲಿ ಖಮೇನಿ ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕಳೆದ ಎರಡು ವಾರಗಳಲ್ಲಿ ಸುಮಾರು ಬರೋಬ್ಬರಿ ಮೂರು ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಆಡಳಿತದ ನಡುವಿನ ಬೆದರಿಕೆ ಮಾತುಗಳು ಮಿಲಿಟರಿ ಸಂಘರ್ಷದ ಭಯವನ್ನು ಹೆಚ್ಚಿಸಿದೆ.


