ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಟ್ರೇಲರ್‌ಗೆ ಪ್ರವಾಸಿ ಬಸ್ ಡಿಕ್ಕಿ ಹೊಡೆದು ಕನಿಷ್ಠ 18 ಮಂದಿ ಭಕ್ತರು ಪ್ರಾಣ ಕಳೆದುಕೊಂಡ ಘಟನೆ ಫಲೋಡಿ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಓಂ ಪ್ರಕಾಶ್ ಪಾಸ್ವಾನ್ ಅವರ ಮಾಹಿತಿಯ ಪ್ರಕಾರ, ಬಿಕಾನೇರ್‌ನ ಕೊಲಾಯತ್ ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುತ್ತಿದ್ದ ಭಕ್ತರು ಜೋಧ್‌ಪುರದ ಸೂರ್‌ಸಾಗರ್‌ನಿಂದ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ನಿಂತಿದ್ದ ಟ್ರೇಲರ್‌ಗೆ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಸ್ಥಳದಲ್ಲೇ ಹಲವರು ಮೃತಪಟ್ಟಿದ್ದು, ಕೆಲವರು ತೀವ್ರ ಗಾಯಗೊಂಡಿದ್ದಾರೆ. ಬಸ್‌ನ ಮುಂಭಾಗ ಸಂಪೂರ್ಣವಾಗಿ ನುಜ್ಜುನುಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರತೆಗೆದಿದ್ದಾರೆ. ಸ್ಥಳೀಯ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ. “ಘಟನೆ ಅತ್ಯಂತ ದುಃಖಕರ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಇದು ರಾಜಸ್ಥಾನದಲ್ಲಿ ನಡೆದ ಎರಡನೇ ದೊಡ್ಡ ದುರಂತವಾಗಿದೆ. ಇತ್ತೀಚೆಗಷ್ಟೇ ಜೈಸಲ್ಮೈರ್‌ನಲ್ಲಿ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು 26 ಮಂದಿ ಸಜೀವ ದಹನಗೊಂಡಿದ್ದರು. ಈಗ ಫಲೋಡಿ ಅಪಘಾತ ಮತ್ತೊಮ್ಮೆ ರಾಜ್ಯದ ಸಾರಿಗೆ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆ ಎಬ್ಬಿಸಿದೆ.

