March 23, 2026
Monday, March 23, 2026
spot_img

ಕಾಡುಹಂದಿಯ ಭೀಕರ ದಾಳಿ: ತಪ್ಪಿಸಿಕೊಳ್ಳಲು ಹೋದವನ ಕಾಲಿನ ಹೆಬ್ಬೆರಳೇ ತುಂಡು

ಹೊಸದಿಗಂತ ಅಂಕೋಲಾ:

ತಾಲೂಕಿನ ಮಾಸ್ತಿಕಟ್ಟಾ ವಲಯ ಅರಣ್ಯ ವ್ಯಾಪ್ತಿಯ ವಾಸರ ಕುದ್ರಗಿ ಉಳಗದ್ದೆಯಲ್ಲಿ ಕಾಡುಹಂದಿಯೊಂದು ನಡೆಸಿದ ಭೀಕರ ದಾಳಿಯಲ್ಲಿ ಯುವಕನೋರ್ವ ತನ್ನ ಕಾಲಿನ ಹೆಬ್ಬೆರಳನ್ನೇ ಕಳೆದುಕೊಂಡ ಘಟನೆ ನಡೆದಿದೆ.

ಉಳಗದ್ದೆ ನಿವಾಸಿಯಾದ ಅರುಣ ಕನ್ನೆ ಗೌಡ (35) ಎಂಬುವವರು ಇಂದು ಎಂದಿನಂತೆ ತಮ್ಮ ಮನೆಯಿಂದ ಕಾಡು ರಸ್ತೆಯ ಮೂಲಕ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಮರಿಗಳೊಂದಿಗೆ ಸಾಗುತ್ತಿದ್ದ ತಾಯಿ ಕಾಡುಹಂದಿಯೊಂದು ಅನಿರೀಕ್ಷಿತವಾಗಿ ಅರುಣ ಅವರ ಮೇಲೆರಗಿದೆ. ಹಂದಿಯ ದಾಳಿಯಿಂದ ಆತಂಕಗೊಂಡ ಅರುಣ ಅವರು ತಕ್ಷಣ ಪ್ರಾಣ ಉಳಿಸಿಕೊಳ್ಳಲು ಹತ್ತಿರವಿದ್ದ ಮರವನ್ನು ಏರಲು ಪ್ರಯತ್ನಿಸಿದ್ದಾರೆ.

ಅರುಣ ಅವರು ಮರ ಏರುತ್ತಿದ್ದಂತೆಯೇ ಜಿಗಿದ ಹಂದಿ, ಅವರ ಕಾಲಿನ ಹೆಬ್ಬೆರಳನ್ನು ಬಲವಾಗಿ ಕಚ್ಚಿದೆ. ಹಂದಿಯ ಕಡಿತದ ರಭಸಕ್ಕೆ ಯುವಕನ ಕಾಲಿನ ಹೆಬ್ಬೆರಳು ಸ್ಥಳದಲ್ಲೇ ತುಂಡಾಗಿ ಹೋಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಈಗಾಗಲೇ ಶಸ್ತ್ರಚಿಕಿತ್ಸೆ ಪೂರೈಸಿದ್ದಾರೆ.

ಕಾಡುಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರ ಓಡಾಟಕ್ಕೂ ಭೀತಿ ಎದುರಾಗಿದೆ. ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು, ಗಾಯಾಳು ಯುವಕನಿಗೆ ಸೂಕ್ತ ಪರಿಹಾರ ಧನ ನೀಡಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !