ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೈಗಾರಿಕೆ ಮತ್ತು ತಂತ್ರಜ್ಞಾನ ಹಬ್ ಆಗಿ ಬೆಳೆಯುತ್ತಿರುವ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತೆ ಅಡ್ಡಿ ಎದುರಾಗಿದೆ. ಈ ಸಂಬಂಧ ಸಲ್ಲಿಸಲಾಗಿದ್ದ ಮನವಿಯನ್ನು ರಕ್ಷಣಾ ಸಚಿವಾಲಯ ಮತ್ತೊಮ್ಮೆ ತಿರಸ್ಕರಿಸಿದ್ದು, ರಾಜ್ಯ–ಕೇಂದ್ರ ನಡುವಿನ ಸಂಯೋಜನೆಯ ಕೊರತೆ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಹೊಸೂರು ಪ್ರದೇಶದ ವಾಯುಪ್ರದೇಶವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಯಂತ್ರಿಸುತ್ತಿರುವುದರಿಂದ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಕ್ಷಣಾ ಸಚಿವಾಲಯದ ಅನುಮತಿ ಕಡ್ಡಾಯವಾಗಿದೆ. HAL ತನ್ನ ವಿಮಾನ ಪರೀಕ್ಷೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಈ ವಾಯುಪ್ರದೇಶ ಅಗತ್ಯವಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ಸಚಿವಾಲಯವು ನಾಗರಿಕ ವಿಮಾನ ನಿಲ್ದಾಣ ಯೋಜನೆಗೆ ಹಸಿರು ನಿಶಾನೆ ತೋರಲು ನಿರಾಕರಿಸಿದೆ.
ಕಳೆದ ವರ್ಷ ಜೂನ್‌ನಲ್ಲಿ ತಮಿಳುನಾಡು ಸರ್ಕಾರ ವಾಯುಪ್ರದೇಶಕ್ಕಾಗಿ ಅಧಿಕೃತವಾಗಿ ಮನವಿ ಸಲ್ಲಿಸಿತ್ತು. ನಂತರ ನವೆಂಬರ್‌ನಲ್ಲಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಳು HAL ಕಾರ್ಯಾಚರಣೆಗೆ ಅಡಚಣೆ ಆಗದಂತೆ ವಿಮಾನ ನಿಲ್ದಾಣ ನಿರ್ಮಿಸಬಹುದಾದ ಮಾರ್ಗಗಳನ್ನು ಸೂಚಿಸಿ, ನಿರ್ದೇಶಾಂಕಗಳೊಂದಿಗೆ ವಿವರವಾದ ಪ್ರತಿಕ್ರಿಯೆ ನೀಡಿದ್ದರು. ಆದರೂ ಯಾವುದೇ ಸಮಾಲೋಚನೆ ಇಲ್ಲದೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಅಸಮಾಧಾನ ಸರ್ಕಾರದ ವಲಯಗಳಲ್ಲಿ ವ್ಯಕ್ತವಾಗಿದೆ.
ಶೂಲಗಿರಿ ತಾಲ್ಲೂಕಿನ ಬೇರಿಗೈ ಮತ್ತು ಬಾಗಲೂರು ನಡುವಿನ ಪ್ರದೇಶದಲ್ಲಿ ಸುಮಾರು 2,300 ಎಕರೆ ಜಮೀನಿನಲ್ಲಿ, ವರ್ಷಕ್ಕೆ 3 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ರಾಜ್ಯದ್ದಾಗಿದೆ. ಈ ನಿರಾಕರಣೆಯ ನಂತರ ಮುಂದಿನ ಕಾನೂನು ಮತ್ತು ಆಡಳಿತಾತ್ಮಕ ಆಯ್ಕೆಗಳ ಬಗ್ಗೆ ತಮಿಳುನಾಡು ಸರ್ಕಾರ ಚರ್ಚೆ ಆರಂಭಿಸಿದೆ.


