ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಮಧ್ಯದಲ್ಲೇ ಖಾಲಿಯಾಗುವುದು ಪ್ರತಿಯೊಬ್ಬರ ಮನೆಗೂ ಪರಿಚಿತ ಸಮಸ್ಯೆ. ಬಹುತೇಕ ಮಹಿಳೆಯರು ಗ್ಯಾಸ್ ಸಿಲಿಂಡರ್ ಯಾವಾಗ ಮುಗಿಯುತ್ತದೆ ಎಂಬುದನ್ನು ಮುಂಚಿತವಾಗಿ ಅಂದಾಜು ಮಾಡಲು ಸಾಧ್ಯವಾಗದೇ ಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದಾಗಿ ಅಡುಗೆ ಅರ್ಧದಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಗ್ಯಾಸ್ ಎಷ್ಟು ಉಳಿದಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಒದ್ದೆಯಾದ ಬಟ್ಟೆಯಿಂದ ಪರೀಕ್ಷಿಸುವ ವಿಧಾನ
ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂದು ತಿಳಿಯಲು ಸ್ವಚ್ಛವಾದ ಬಟ್ಟೆಯನ್ನು ಒದ್ದೆ ಮಾಡಿ ಸಿಲಿಂಡರ್ ಸುತ್ತಲೂ ಸುತ್ತಬೇಕು. ಸುಮಾರು ಐದು ನಿಮಿಷಗಳ ನಂತರ ಬಟ್ಟೆಯನ್ನು ತೆಗೆದಾಗ, ಒಣಗಿದ ಭಾಗದಲ್ಲಿ ಗ್ಯಾಸ್ ಕಡಿಮೆ ಇರುತ್ತದೆ. ಬಟ್ಟೆ ಒದ್ದೆಯೇ ಉಳಿದಿರುವ ಭಾಗದಲ್ಲಿ ಗ್ಯಾಸ್ ಇರುವುದು ಖಚಿತ.

ಇದರ ಹಿಂದಿನ ವೈಜ್ಞಾನಿಕ ಕಾರಣ
ಎಲ್‌ಪಿಜಿ ಗ್ಯಾಸ್ ತಂಪಾದ ಸ್ವಭಾವ ಹೊಂದಿರುವುದರಿಂದ ಸಿಲಿಂಡರ್‌ನಲ್ಲಿ ಅನಿಲವಿರುವ ಭಾಗ ತಂಪಾಗಿರುತ್ತದೆ. ಆ ಭಾಗದಲ್ಲಿ ಬಟ್ಟೆ ಒಣಗುವುದಿಲ್ಲ. ಆದರೆ ಅನಿಲವಿಲ್ಲದ ಭಾಗ ಬಿಸಿಯಾಗಿರುತ್ತದೆ, ಆದ್ದರಿಂದ ಬಟ್ಟೆ ಬೇಗನೆ ಒಣಗುತ್ತದೆ. ಈ ಮೂಲಕ ಗ್ಯಾಸ್ ಉಳಿದಿರುವ ಪ್ರಮಾಣವನ್ನು ತಿಳಿದುಕೊಳ್ಳಬಹುದು.
ತೂಕದ ಮೂಲಕ ಅಂದಾಜು
ಗ್ಯಾಸ್ ಸಿಲಿಂಡರ್‌ನ್ನು ಎತ್ತಿ ನೋಡುವುದರಿಂದಲೂ ಅನಿಲ ಪ್ರಮಾಣವನ್ನು ಅಂದಾಜು ಮಾಡಬಹುದು. ಸಿಲಿಂಡರ್ ಭಾರವಾಗಿದ್ದರೆ ಸಾಕಷ್ಟು ಗ್ಯಾಸ್ ಉಳಿದಿದೆ ಎನ್ನಬಹುದು. ಸಿಲಿಂಡರ್ ಹಗುರವಾಗಿ ತೋರಿದರೆ, ಅದರಲ್ಲಿ ಅನಿಲ ಕಡಿಮೆ ಉಳಿದಿದೆ.

ಅಲುಗಾಡಿಸುವ ಮೂಲಕ ತಿಳಿಯುವುದು
ಸಿಲಿಂಡರ್‌ನ್ನು ಸ್ವಲ್ಪ ಅಲುಗಾಡಿಸಿದರೆ ಒಳಗಿರುವ ಗ್ಯಾಸ್ ಚಲನೆಯಿಂದ ಶಬ್ದ ಉಂಟಾಗುತ್ತದೆ. ಶಬ್ದ ಜಾಸ್ತಿ ಆಗಿದ್ದರೆ ಗ್ಯಾಸ್ ಪ್ರಮಾಣ ಕಡಿಮೆ ಎಂದು ಅರ್ಥ. ಶಬ್ದ ಕಡಿಮೆ ಇದ್ದರೆ ಗ್ಯಾಸ್ ಇನ್ನೂ ತುಂಬಿಕೊಂಡಿದೆ ಎಂದು ಹೇಳಬಹುದು.