ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ, ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರು ಮಿದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಅವರ ಆರೋಗ್ಯದ ಕುರಿತು ವೈದ್ಯರು ಮಾಹಿತಿ ಹಂಚಿಕೊಂಡಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ತಂಡದ ಪ್ರಕಾರ, ಮಂಗಳವಾರ ಬೆಳಗ್ಗೆ 8:30ರ ಸುಮಾರಿಗೆ ಸಲೀಂ ಖಾನ್ ಅವರನ್ನು ಅವರ ಫ್ಯಾಮಿಲಿ ಫಿಸಿಶಿಯನ್ ಡಾ.ಸಂದೀಪ್ ಚೋಪ್ರಾ ಆಸ್ಪತ್ರೆಗೆ ಕರೆತಂದರು. ಎಮರ್ಜೆನ್ಸಿ ವಾರ್ಡ್ಗೆ ಬಂದಾಗ ರಕ್ತದೊತ್ತಡ ಹೆಚ್ಚಾಗಿತ್ತು. ವೈದ್ಯರು ತಕ್ಷಣ ಎಮರ್ಜೆನ್ಸಿ ರೂಮ್ನಲ್ಲಿ ಚಿಕಿತ್ಸೆ ಆರಂಭಿಸಿದರು. ರಕ್ತದೊತ್ತಡ ನಿಯಂತ್ರಿಸಲು ಔಷಧಿ ನೀಡಿದರು.
ಆರೋಗ್ಯ ಹದಗೆಡಬಾರದು ಮತ್ತು ಪ್ರಮುಖ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸಬೇಕಾದ ಅಗತ್ಯವಿರುವುದರಿಂದ ಮುನ್ನೆಚ್ಚರಿಕೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವೈದ್ಯರು ವಿವರ ನೀಡಿದ್ದಾರೆ.
ಸಲೀಂ ಖಾನ್ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿಟ್ಟ ನಂತರ ಹಲವು ಟೆಸ್ಟ್ಗಳನ್ನು ಮಾಡಲಾಗಿದೆ. ಇವುಗಳಲ್ಲಿ ಎಮ್ಆರ್ಐ, ಸಿ.ಟಿ ಸ್ಕ್ಯಾನ್ ಮತ್ತು ಬ್ಲಡ್ ಟೆಸ್ಟ್ ಸೇರಿವೆ. ಇಂದು, ನರಶಸ್ತ್ರಚಿಕಿತ್ಸಕ ಡಾ.ನಿತಿನ್ ಡಾಂಗೆ ಅವರು ಡಿಎಸ್ಎ ಎಂಬ ಚಿಕಿತ್ಸೆಯನ್ನು ನಡೆಸಿದ್ದು, ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಐಸಿಯುನಲ್ಲಿದ್ದಾರೆ. ವೈದ್ಯರ ನಿಗಾದಲ್ಲಿದ್ದಾರೆ. ಚೇತರಿಕೆಯ ಆಧಾರದ ಮೇಲೆ ಅವರನ್ನು ಶೀಘ್ರದಲ್ಲೇ ವೆಂಟಿಲೇಟರ್‌ನಿಂದ ಹೊರಕರೆಸಬಹುದು ಎಂದು ವೈದ್ಯರು ಹೇಳಿದ್ದಾರೆ.
ಸಲೀಂ ಖಾನ್‌ಗೆ ಸುಮಾರು 90 ವರ್ಷ ವಯಸ್ಸಾಗಿದ್ದು, ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.



