ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಆರೋಗ್ಯದಲ್ಲಿ ಇಂದು ಅಲ್ಪ ಚೇತರಿಕೆ ಕಂಡು ಬಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕೇರಿ ಅವರ ಕ್ಯಾಚ್ ಪಡೆಯುವ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿದ್ದ ಅಯ್ಯರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ ಅವರ ಪೆಕ್ಕೆಲುಬಿನಲ್ಲಿ ಆಂತರಿಕ ರಕ್ತಸ್ರಾವವಾಗಿದ್ದ ಕಾರಣ ಐಸಿಯುನಲ್ಲಿರಿಸಲಾಗಿತ್ತು. ಆದರೆ ಸ್ವಲ್ಪ ನಿಯಂತ್ರಣ ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ಶ್ರೇಯಸ್ ಅಯ್ಯರ್ ಅವರನ್ನು ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಮಾಡಲಾಗಿದ್ದು, ಸಣ್ಣದೊಂದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಇದೀಗ ಶ್ರೇಯಸ್ ಅಯ್ಯರ್ ಆರೋಗ್ಯದ ಕುರಿತು ಸೂರ್ಯಕುಮಾರ್ ಯಾದವ್ ಮಾಹಿತಿ ನೀಡಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ಮಾತನಾಡಿದ ಸೂರ್ಯಕುಮಾರ್ ಯಾದವ್, ಅಯ್ಯರ್ ಅವರ ಚೇತರಿಕೆಯ ಮಾಹಿತಿ ನೀಡಿದರು. ‘ಅಯ್ಯರ್ ಇನ್ನೂ ಕೆಲವು ದಿನಗಳವರೆಗೆ ವೈದ್ಯರ ನಿಗಾದಲ್ಲಿ ಉಳಿಯುವ ನಿರೀಕ್ಷೆಯಿದೆ, ಆದರೆ ಪ್ರಸ್ತುತ ಅವರು ಅಪಾಯದಿಂದ ಪಾರಾಗಿದ್ದಾರೆ. ಫೋನ್ ಕರೆಗಳ ಮೂಲಕ ಮಾತನಾಡುತ್ತಿದ್ದಾರೆ’ ಎಂದು ಸೂರ್ಯ ಹೇಳಿದರು.
ಮೊದಲ ದಿನ, ಅವರು ಗಾಯಗೊಂಡಿದ್ದಾರೆಂದು ತಿಳಿದಾಗ, ನಾನು ಅವರಿಗೆ ಕರೆ ಮಾಡಿದೆ. ಅವರ ಬಳಿ ಫೋನ್ ಇಲ್ಲ ಎಂದು ನನಗೆ ತಿಳಿಯಿತು. ಹಾಗಾಗಿ, ನಾನು ಫಿಸಿಯೋಗೆ ಕರೆ ಮಾಡಿದೆ ಮತ್ತು ಅವರು ಸ್ಥಿರವಾಗಿದ್ದಾರೆ ಎಂದು ಹೇಳಿದರು. ಕಳೆದ ಎರಡು ದಿನಗಳಿಂದ ನಾನು ಅವರೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಅವರು ಫೋನ್‌ನಲ್ಲಿ ಉತ್ತರಿಸುತ್ತಿದ್ದಾರೆ. ಅವರು ಉತ್ತರಿಸುತ್ತಿದ್ದರೆ, ಅವರು ಸ್ಥಿರವಾಗಿದ್ದಾರೆ ಎಂದರ್ಥ. ಅವರು ಚೆನ್ನಾಗಿ ಕಾಣುತ್ತಿದ್ದಾರೆ, ವೈದ್ಯರು ಅವರೊಂದಿಗೆ ಇದ್ದಾರೆ. ಆದರೆ ಅವರು ಮುಂದಿನ ಕೆಲವು ದಿನಗಳವರೆಗೆ ಮೇಲ್ವಿಚಾರಣೆಯಲ್ಲಿರುತ್ತಾರೆ. ಸರಣಿಯ ನಂತರ ನಾವು ಅವರನ್ನು ಭಾರತಕ್ಕೆ ಕರೆದೊಯ್ಯುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ಅಯ್ಯರ್ ಅಪಾಯದಿಂದ ಪಾರಾಗಿದ್ದಾರೆ ಮತ್ತು ಅವರನ್ನು ಐಸಿಯುನಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

                                    