Wednesday, September 3, 2025

Kitchen Tips | ಎಷ್ಟು ವರ್ಷದಿಂದ ಒಂದೇ ಪ್ರೆಶರ್ ಕುಕ್ಕರ್ ಬಳಸುತ್ತಿದ್ದೀರಾ? ಅದನ್ನ ಯಾವಾಗ ಬದಲಾಯಿಸಬೇಕು ಗೊತ್ತಾ?

ಪ್ರತಿ ಮನೆಯಲ್ಲಿ ಅನ್ನ, ಬೇಳೆ ಮತ್ತು ತರಕಾರಿ ಬೇಯಿಸೋಕೆ ಪ್ರೆಶರ್ ಕುಕ್ಕರ್ ಅವಶ್ಯಕ. ಆದರೆ ದೀರ್ಘಕಾಲದಿಂದ ಬಳಸುತ್ತಿರುವ ಹಳೆಯ ಪ್ರೆಶರ್ ಕುಕ್ಕರ್ ನಿಮ್ಮ ಆರೋಗ್ಯಕ್ಕೆ ಮೌನವಾಗಿ ಹಾನಿ ಮಾಡುತ್ತಿರಬಹುದು ಎಂಬುದನ್ನು ಹಲವರು ಗಮನಿಸುತ್ತಿಲ್ಲ. ತಜ್ಞರ ಪ್ರಕಾರ ಹಳೆಯ ಕುಕ್ಕರ್‌ನೊಳಗೆ ಬಳಸುವ ಅಲ್ಯೂಮಿನಿಯಂ ಅಥವಾ ಸೀಸ ಆಹಾರದಲ್ಲಿ ಬೆರೆತು ದೇಹಕ್ಕೆ ಸೇರುವ ಅಪಾಯವಿದೆ. ಇದರ ಪರಿಣಾಮ ತಕ್ಷಣ ಗೋಚರಿಸದಿದ್ದರೂ, ವರ್ಷಗಳ ಕಾಲ ದೇಹದಲ್ಲಿ ಸಂಗ್ರಹವಾಗಿ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

ಹತ್ತು ವರ್ಷಕ್ಕಿಂತ ಹಳೆಯ ಕುಕ್ಕರ್ ಅಪಾಯಕಾರಿ

ತಜ್ಞರು ಹೇಳುವಂತೆ, ನಿಮ್ಮ ಪ್ರೆಶರ್ ಕುಕ್ಕರ್ 10 ವರ್ಷಕ್ಕಿಂತ ಹಳೆಯದಾದರೆ ತಕ್ಷಣವೇ ಅದನ್ನು ಬದಲಾಯಿಸುವುದು ಉತ್ತಮ. ಮಕ್ಕಳಿಗೆ ಇದು ಇನ್ನೂ ಅಪಾಯಕಾರಿ, ಏಕೆಂದರೆ ಲೋಹದ ಅಂಶಗಳು ಅವರ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸಿ ಐಕ್ಯೂ ಕುಗ್ಗಿಸುವ ಸಾಧ್ಯತೆ ಇದೆ.

ಹಳೆಯ ಕುಕ್ಕರ್ ಅನ್ನು ಹೇಗೆ ಗುರುತಿಸುವುದು?

ಕುಕ್ಕರ್ ಒಳಗೆ ಗೀರುಗಳು ಅಥವಾ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುವುದು

ಮುಚ್ಚಳ ಅಥವಾ ಸೀಟಿ ಸಡಿಲಾಗುವುದು

ಆಹಾರಕ್ಕೆ ಲೋಹದ ವಾಸನೆ ಬರುತ್ತಿರುವುದು

ಈ ಲಕ್ಷಣಗಳು ಗೋಚರಿಸಿದರೆ, ಹೊಸ ಕುಕ್ಕರ್ ಖರೀದಿಸುವ ಸಮಯ ಬಂದಿದೆ ಎನ್ನುವುದು ಸ್ಪಷ್ಟ.

ದೇಹಕ್ಕೆ ಉಂಟಾಗುವ ಹಾನಿ

ಹಳೆಯ ಕುಕ್ಕರ್‌ನಿಂದ ಆಹಾರದಲ್ಲಿ ಬೆರೆತು ಹೋಗುವ ಅಲ್ಯೂಮಿನಿಯಂ ಮತ್ತು ಸೀಸ ದೇಹದಲ್ಲಿ ನಿಧಾನವಾಗಿ ಸಂಗ್ರಹವಾಗುತ್ತವೆ. ಇದರಿಂದ ಆಯಾಸ, ನೆನಪಿನ ಸಮಸ್ಯೆಗಳು, ಮನಸ್ಥಿತಿ ಬದಲಾವಣೆ, ರಕ್ತದೊತ್ತಡದ ತೊಂದರೆಗಳು ಹಾಗೂ ಮೂತ್ರಪಿಂಡ ಸಮಸ್ಯೆಗಳು ಉಂಟಾಗುತ್ತವೆ. ಮಕ್ಕಳಲ್ಲಿ ಕಲಿಕೆಯ ತೊಂದರೆ, ನಡವಳಿಕೆಯ ಸಮಸ್ಯೆಗಳು ಮತ್ತು ಐಕ್ಯೂ ಕುಸಿತ ಕಂಡುಬರುತ್ತದೆ.

ಪ್ರತಿಯೊಂದು ಹಳೆಯ ಕುಕ್ಕರ್ ಅಪಾಯಕಾರಿಯೇ?

ಎಲ್ಲಾ ಹಳೆಯ ಕುಕ್ಕರ್‌ಗಳು ತಕ್ಷಣ ಅಪಾಯಕಾರಿ ಅಲ್ಲ. ಆದರೆ ಅಲ್ಪ ಪ್ರಮಾಣದ ಲೋಹದ ಅಂಶವೂ ದೀರ್ಘಕಾಲದವರೆಗೆ ದೇಹದಲ್ಲಿ ಸಂಗ್ರಹವಾಗಿ ಹಾನಿ ಮಾಡುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಹಳೆಯ ಕುಕ್ಕರ್ ಬಳಕೆಯನ್ನು ನಿಲ್ಲಿಸಿ, ಹೊಸ ಪ್ರೆಶರ್ ಕುಕ್ಕರ್ ಬಳಸುವುದು ಉತ್ತಮ.

ಇದನ್ನೂ ಓದಿ