ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ರಾಜಧಾನಿ ಬೀಜಿಂಗ್ ಇಂದು ಎರಡನೇ ಮಹಾಯುದ್ಧದ 80ನೇ ವಾರ್ಷಿಕೋತ್ಸವವನ್ನು ಗುರುತಿಸಲು ಆಯೋಜಿಸಲಾಗಿದ್ದ ಬೃಹತ್ ಮಿಲಿಟರಿ ಪರೇಡ್, ಚೀನಾದ ಸಾಮರಿಕ ಶಕ್ತಿಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಜಪಾನ್ ದೇಶ ಎರಡನೇ ವಿಶ್ವ ಮಹಾಯುದ್ಧದಲ್ಲಿ ಸೋತು 80 ವರ್ಷವಾದ ಸಂದರ್ಭ. ಆ ಸೋಲನ್ನು ಆಚರಿಸಲು ಈ ಮಿಲಿಟರಿ ಪರೇಡ್ ನಡೆಸಲಾಗಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಈ ಬೃಹತ್ ಮಿಲಿಟರಿ ಪರೇಡ್ ಅನ್ನು ಕಣ್ತುಂಬಿಕೊಳ್ಳಲು 50,000ಕ್ಕೂ ಅಧಿಕ ಜನರು ಸೇರಿದ್ದರು. ಚೀನಾದ ಕಮ್ಯೂನಿಸ್ಟ್ ಮೇರು ಮುಖಂಡರೆನಿಸಿದ್ದ ಮಾವೋ ಜೆಡಾಂಗ್ ಅವರು ಧರಿಸುತ್ತಿದ್ದ ಶೈಲಿಯ ಉಡುಗೆಯನ್ನು ಷಿ ಜಿನ್‌ಪಿಂಗ್ ತೊಟ್ಟು ಬಂದಿದ್ದರು. ಚೀನಾದ ಮೂರೂ ರಕ್ಷಣಾ ಪಡೆಗಳು, ಅರೆಸೈನಿಕ ದಳಗಳು ಮತ್ತು ಇತರ ರಕ್ಷಣಾ ಸಂಘಟನೆಗಳು ಈ ಪರೇಡ್‌ನಲ್ಲಿ ಭಾಗವಹಿಸಿದ್ದರು.
ಬೀಜಿಂಗ್‌ನಲ್ಲಿ ನಡೆದ ಸಾಮೂಹಿಕ ಮಿಲಿಟರಿ ಪರೇಡ್ ನೇತೃತ್ವವಹಿಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಸಾಮರಿಕ ಶಕ್ತಿಯನ್ನು ಜಗತ್ತಿಗೆ ತೋರಿಸುವಲ್ಲಿ ನಿರತರಾಗಿದ್ದರು. ಚೀನಾದ ಮೂರೂ ರಕ್ಷಣಾ ಪಡೆಗಳು, ಅರೆಸೈನಿಕ ದಳಗಳು ಮತ್ತು ಇತರ ರಕ್ಷಣಾ ಸಂಘಟನೆಗಳು ಈ ಪರೇಡ್‌ನಲ್ಲಿ ಭಾಗವಹಿಸಿದ್ದರು.

ಚೀನಾ ಸಮುದ್ರ, ಭೂಮಿ ಮತ್ತು ಆಕಾಶದಿಂದ ಒಟ್ಟಿಗೆ ಉಡಾಯಿಸಬಹುದಾದ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಪ್ರದರ್ಶಿಸಿತು.ವಾಯು-ಆಧಾರಿತ, ದೀರ್ಘ-ಶ್ರೇಣಿಯ ಕ್ಷಿಪಣಿ ಜಿಂಗ್ಲೀ-1, ಜಲಾಂತರ್ಗಾಮಿ-ಉಡಾವಣಾ ಖಂಡಾಂತರ ಕ್ಷಿಪಣಿ ಜುಲಾಂಗ್-3 ಮತ್ತು ಭೂ-ಆಧಾರಿತ ಖಂಡಾಂತರ ಕ್ಷಿಪಣಿಗಳಾದ ಡಾಂಗ್‌ಫೆಂಗ್-61 (DF-61) ಮತ್ತು ಡಾಂಗ್‌ಫೆಂಗ್-31 ಕ್ಷಿಪಣಿಗಳನ್ನು ಪ್ರದರ್ಶಿಸಲಾಗಿದೆ.
ಈ ಮೆರವಣಿಗೆಯಲ್ಲಿ ಚೀನಾ ತನ್ನ ಹೈಪರ್‌ಸಾನಿಕ್ ಹಡಗು ವಿರೋಧಿ ಕ್ಷಿಪಣಿಗಳನ್ನು ಪ್ರದರ್ಶಿಸಿದ್ದು, ಯಿಂಗ್‌ಜಿ-19, ಯಿಂಗ್‌ಜಿ-17 ಮತ್ತು ಯಿಂಗ್‌ಜಿ-20 ಇವುಗಳಲ್ಲಿ ಸೇರಿವೆ.ಇತರ ಕ್ಷಿಪಣಿಗಳಲ್ಲಿ ಚಾಂಗ್ಜಿಯಾನ್-20A, ಯಿಂಗ್ಜಿ-18C, ಚಾಂಗ್ಜಿಯಾನ್-1000 – ಕ್ರೂಸ್ ಕ್ಷಿಪಣಿಗಳು ಮತ್ತು ಇತರ ಹೈಪರ್‌ಸಾನಿಕ್ ಕ್ಷಿಪಣಿಗಳಾದ ಯಿಂಗ್ಜಿ-21, ಡಾಂಗ್‌ಫೆಂಗ್-17 ಮತ್ತು ಡಾಂಗ್‌ಫೆಂಗ್-26D ಪ್ರದರ್ಶನ ಗಮನ ಸೆಳೆದಿದೆ.
ಡ್ರೋನ್ ದಾಳಿಯ ವಿರುದ್ಧ ರಕ್ಷಣೆಯಾಗಿ ಚೀನಾ ಲೇಸರ್ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬಾರಿಯ ಮಿಲಿಟರಿ ಪರೇಡ್‌ನಲ್ಲಿ ಪ್ರದರ್ಶಿಸಲಾದ ಅದರ ಡ್ರೋನ್ ವಿರೋಧಿ ವ್ಯವಸ್ಥೆಗಳ ಸಂಪೂರ್ಣ ಶ್ರೇಣಿಯಲ್ಲಿ, ಕ್ಷಿಪಣಿ ಗನ್, ಹೆಚ್ಚಿನ ಶಕ್ತಿಯ ಲೇಸರ್ ಶಸ್ತ್ರಾಸ್ತ್ರಗಳು ಮತ್ತು ಹೆಚ್ಚಿನ ಶಕ್ತಿಯ ಮೈಕ್ರೋವೇವ್ ಶಸ್ತ್ರಾಸ್ತ್ರಗಳು ಸೇರಿವೆ.
ಚೀನಾ ನೀರೊಳಗಿನ ಮತ್ತು ಗಾಳಿಯಲ್ಲಿ ಕಾರ್ಯನಿರ್ವಹಿಸಬಲ್ಲ ಡ್ರೋನ್‌ಗಳನ್ನು ಪ್ರದರ್ಶಿಸಿತು, ಇದರಲ್ಲಿ ವಿಚಕ್ಷಣಕ್ಕಾಗಿ ಮತ್ತು ಗುರಿಗಳನ್ನು ಹೊಡೆಯಲು ಬಳಸಬಹುದಾದ ಡ್ರೋನ್‌ಗಳು ಸೇರಿವೆ.
ಒಟ್ಟಿನಲ್ಲಿ ಚೀನಾ ತನ್ನ ವಾರ್ಷಿಕ ಮಿಲಿಟರಿ ಪರೇಡ್ ಮತ್ತು ಎರಡನೇ ಮಹಾಯುದ್ಧದ ಅಂತ್ಯದ ಸ್ಮರಣಾರ್ಥ ಹಮ್ಮಿಕೊಂಡಿದ್ದ ಬೃಹತ್ ಮಿಲಿಟರಿ ಪರೇಡ್, ಡ್ರ್ಯಾಗನ್ ರಾಷ್ಟ್ರದ ಬೃಹತ್ ಸಾಮರಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ.