Friday, September 12, 2025

ಜಿಎಸ್ ಟಿಯಲ್ಲಿ ಭಾರೀ ಕಡಿತ: ಶೇ. 28, ಶೇ. 12 ರಷ್ಟು ತೆರಿಗೆ ರದ್ದುಗೊಳಿಸಲು ಸಿಕ್ಕಿತು ಸಮ್ಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಎಸ್ಟಿ (GST)ಯಲ್ಲಿ ಸುಧಾರಣೆ ತರುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ಇನ್ನೊಂದು ಹೆಜ್ಜೆ ಇಟ್ಟಾಗಿದೆ. ಸರಕು ಮತ್ತು ಸೇವಾ (GST) ತೆರಿಗೆ ಸ್ಲ್ಯಾಬ್ ನಲ್ಲಿ ಭಾರೀ ಕಡಿತ ಮಾಡಲು ಜಿಎಸ್ ಟಿ ಕೌನ್ಸಿಲ್ ಸಭೆ ( GoM) ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ.

ಗುರುವಾರ ನಡೆದ ರಾಜ್ಯ ಸಚಿವರನ್ನೊಳಗೊಂಡ ಸಮಿತಿ ಸಭೆಯಲ್ಲಿ ನಾಲ್ಕು ದರಗಳ ವ್ಯವಸ್ಥೆಯನ್ನು ಎರಡು ಪ್ರಮುಖ ಸ್ಲ್ಯಾಬ್ ಗಳಾದ ಶೇ. 5 ಮತ್ತು ಶೇ. 18 ಕ್ಕೆ ಇಳಿಕೆ ಮಾಡಲು ಅನುಮೋದನೆ ನೀಡಿದೆ. GST 2.0 ಎಂದು ಕರೆಯಲಾಗುವ ಈ ಕ್ರಮದಿಂದಾಗಿ ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

ಸದ್ಯ ಶೇ.5, ಶೇ. 12, ಶೇ.18 ಮತ್ತು ಶೇ. 28 ರಂತೆ ನಾಲ್ಕು ವಿಭಿನ್ನ ದರಗಳಲ್ಲಿ ಜಿಎಸ್ ಟಿಯನ್ನು ಹಾಕಲಾಗುತ್ತಿದೆ. ನೂತನ ವ್ಯವಸ್ಥೆಯಡಿ ಶೇ. 12 ಮತ್ತು ಶೇ. 28 ರಷ್ಟು ಸ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗುತ್ತದೆ. ಇದರಿಂದಾಗಿ ಸರಕು ಮತ್ತು ಸೇವೆಗಳಿಗೆ ಶೇ. 5 ರಷ್ಟು ಮತ್ತು ಶೇ. 18 ರಷ್ಟು ತೆರಿಗೆ ನೀಡಬೇಕಾಗುತ್ತದೆ.

ನೂತನ ಯೋಜನೆ ಪ್ರಕಾರ, ಈ ಹಿಂದೆ ಶೇ. 12 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಶೇ. 99 ರಷ್ಟು ಸರಕುಗಳು ಈಗ ಶೇ. 5 ರಷ್ಟು ಕಡಿಮೆ ಸ್ಲ್ಯಾಬ್‌ಗೆ ಹೋಗುತ್ತವೆ. ಅಂತೆಯೇ ಶೇ. 28 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಶೇ. 90 ರಷ್ಟು ಸರಕುಗಳು ಶೇ. 18ರ ಸ್ಲ್ಯಾಬ್ ಗೆ ಬದಲಾಗುತ್ತವೆ.

ಪ್ರಸ್ತುತ ಈಗ ಅಗತ್ಯ ವಸ್ತುಗಳಿಗೆ 0%, ಮೂಲಭೂತ ಅಗತ್ಯಗಳಿಗೆ ಬೇಕಾದ ವಸ್ತುಗಳಿಗೆ 5%, ಪ್ರಮಾಣಿತ ಸರಕುಗಳಿಗೆ 12%, ಹೆಚ್ಚಿನ ಗ್ರಾಹಕ ಉತ್ಪನ್ನಗಳಿಗೆ 18%, ಐಷಾರಾಮಿ ಸರಕುಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತಿದೆ.

ಸದ್ಯ ಈಗ ಇರುವ ಸ್ಲ್ಯಾಬ್‌ಗಳ ಪೈಕಿ 5% ಮತ್ತು 18% ಸ್ಲ್ಯಾಬ್‌ ಮಾತ್ರ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯಡಿಯಲ್ಲಿ 28% ನಲ್ಲಿರುವ 90% ರಷ್ಟು ವಸ್ತುಗಳನ್ನು 18%ಕ್ಕೆ ವರ್ಗಾಯಿಸಲಾಗುತ್ತದೆ, 12% ರಷ್ಟು ಸ್ಲ್ಯಾಬ್‌ನಲ್ಲಿರುವ 99% ರಷ್ಟು ವಸ್ತುಗಳನ್ನು 5% ಸ್ಲ್ಯಾಬ್‌ಗೆ ವರ್ಗಾಯಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಐಷಾರಾಮಿ ಸರಕುಗಳಿಗೆ 40% ದರ ಅನ್ವಯಿಸುತ್ತದೆ. ಇದರಲ್ಲಿ ತಂಬಾಕು, ಗುಟ್ಕಾ ಮತ್ತು ಸಿಗರೇಟ್ ಸೇರಿವೆ. ಸರ್ಕಾರಿ ಮೂಲಗಳ ಪ್ರಕಾರ 40% ವರ್ಗವು ಕೇವಲ 5-7 ವಸ್ತುಗಳನ್ನು ಮಾತ್ರ ಹೊಂದಿರುತ್ತದೆ. ರೆಫ್ರಿಜರೇಟರ್, ಎಸಿ, ವಾಷಿಂಗ್‌ ಮಷೀನ್‌ನಂತ ವಸ್ತುಗಳನ್ನು ಇದರಿಂದ ಹೊರಗಿಡಲಾಗುತ್ತದೆ.

ಒಟ್ಟು ಜಿಎಸ್‌ಟಿ ಆದಾಯದ ಪೈಕಿ 67% ಆದಾಯ 18% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿದೆ. 11% ಮತ್ತು 5% ಆದಾಯ ಕ್ರಮವಾಗಿ 28% ಮತ್ತು 12% ಬಂದರೆ, 12% ಆದಾಯ 5% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ತೆರಿಗೆ ಪರಿಷ್ಕರಣೆಯಾದರೂ ಪೆಟ್ರೋಲ್‌, ಡೀಸೆಲ್‌ ದರಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗುತ್ತದೆ.

ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇ ಗೌಡ, ಕೇರಳದ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ