Wednesday, October 22, 2025

30 ಲಕ್ಷ ರೂ. ಇನ್ಶೂರೆನ್ಸ್‌ ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

30 ಲಕ್ಷ ರೂ. ಇನ್ಶೂರೆನ್ಸ್‌ ಹಣಕ್ಕಾಗಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಜಾರ್ಖಂಡ್‌ನ ಹಝಾರಿಬಾಗ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 30 ಲಕ್ಷ ರೂ. ಇನ್ಶೂರೆನ್ಸ್‌ ಹಣಕ್ಕಾಗಿ ಪತ್ನಿಯನ್ನೇ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಮುಂದಾದ ಪಾಪಿ ಪತಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ .

ಆರೋಪಿಯನ್ನು 30 ವರ್ಷದ ಮುಕೇಶ್‌ ಕುಮಾರ್‌ ಮೆಹ್ತಾ ಎಂದು ಗುರುತಿಸಲಾಗಿದೆ. 4 ತಿಂಗಳ ಹಿಂದೆಯಷ್ಟೇ ಮದುವೆಯಾಗಿ ವೈವಾಹಿಕ ಜೀವನದ ಬಗ್ಗೆ ಅಪಾರ ಕನಸು ಕಂಡಿದ್ದ ಸೇವಂತಿ ಕುಮಾರಿ (23) ಮೃತ ನತದೃಷ್ಟೆ.

ಪದಮ ಔಟ್‌ ಪೋಸ್ಟ್‌ನ ಉಸ್ತುವಾರಿ ಸಂಚಿತ್‌ ಕುಮಾರ್‌ ದುಬೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 9ರಂದು ರಾಷ್ಟ್ರೀಯ ಹೆದ್ದಾರಿ 33ರ ಪದಮ-ಇಟ್ಖೋರಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ಗಾಯಗೊಂಡಿದ್ದಾರೆ ಎಂಬ ದೂರು ಬಂತು. ನಾವು ಸ್ಥಳಕ್ಕೆ ಧಾವಿಸಿದಾಗ ಸೇವಂತಿ ಕುಮಾರಿ ಮೃತಪಟ್ಟಿದ್ದರು. ಪ್ರಜ್ಞಾಹೀನನಾಗಿ ಬಿದ್ದಿದ್ದ ಅವರ ಪತಿ ಮುಕೇಶ್‌ನನ್ನು ಸದರ್ ಆಸ್ಪತ್ರೆಗೆ ಕರೆತಂದೆವು. ಬಳಿಕ ಸೇವಂತಿ ಅವರ ಮೃತದೇಹವನ್ನು ಪೋಸ್ಟ್‌ ಮಾರ್ಟಂಗೆ ಕಳುಹಿಸಿದೆವು. ಸಣ್ಣ-ಪುಟ್ಟ ಗಾಯಗೊಂಡಿದ್ದ ಮುಕೇಶ್‌ಗೆ ಚಿಕಿತ್ಸೆ ನೀಡಲಾಯಿತು ಎಂದು ತಿಳಿಸಿದ್ದಾರೆ.

ಅದಾಗ್ಯೂ ಸೇವಂತಿ ಅವರ ಅಂತ್ಯಕ್ರಿಯೆ ನಡೆಸುವಾಗ ಮುಕೇಶ್‌ ನಡೆದುಕೊಂಡ ರೀತಿ ಅನುಮಾನಕ್ಕೆ ಕಾರಣವಾಗಿತ್ತು. ಪತ್ನಿಯ ಅಂತ್ಯಕ್ರಿಯೆಯ ಸಮಯದಲ್ಲಿ ಪತಿಯ ಅನುಮಾನಾಸ್ಪದ ವರ್ತನೆಯ ಬಗ್ಗೆ ಸ್ಥಳೀಯರಿಂದ ನಮಗೆ ದೂರು ಬಂತು. ನಾವು ತನಿಖೆಯನ್ನು ಪ್ರಾರಂಭಿಸಿದಾಗ ಮುಕೇಶ್‌ 30 ಲಕ್ಷ ರೂ. ಅಪಘಾತ ವಿಮಾ ಕ್ಲೇಮ್‌ಗೆ ಅರ್ಜಿ ಸಲ್ಲಿಸಿರುವುದು ಗೊತ್ತಾಯಿತು. ಅನುಮಾನ ಬಂದು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದೆವು ಎಂದು ವಿವರಿಸಿದ್ದಾರೆ.

ವಿಚಾರಣೆ ವೇಳೆ ಮುಕೇಶ್‌ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾನೆ. 30 ಲಕ್ಷ ರೂ. ಇನ್ಶೂರೆನ್ಸ್‌ ಹಣಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೇವಂತಿಯನ್ನು ಅಕ್ಟೋಬರ್‌ 9ರಂದು ಮುಕೇಶ್‌ ತನ್ನ ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟ. ಮಾರ್ಗ ಮಧ್ಯೆ ಸೇವಂತಿಗೆ ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ನಡೆಸಿದ. ರಕ್ತ ಸೋರುತ್ತಿದ್ದ ಆಕೆ ಕುಸಿದು ಬಿದ್ದ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ. ನಂತರ ಆಕೆಯ ಮೃತದೇಹವನ್ನು ರಸ್ತೆಗೆ ಎಸೆದು ಬೈಕ್‌ ಅನ್ನು ಮಗುಚಿ ಹಾಕಿ ಅಪಘಾತವಾಗಿರುವಂತೆ ಬಿಂಬಿಸಿದ ಎಂದು ಸಂಚಿತ್‌ ಕುಮಾರ್‌ ಹೇಳಿದ್ದಾರೆ.

error: Content is protected !!