ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗಂಡನೊಬ್ಬ ತನ್ನ ಪತ್ನಿಯ ಮೇಲೆ ಗನ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆಬೆಂಗಳೂರು ನಗರದ ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಸಮೀಪ ನಡೆದಿದೆ.
ಪತಿ–ಪತ್ನಿಯ ನಡುವೆ ನಡೆಯುತ್ತಿದ್ದ ವಿಚ್ಛೇದನ (ಡೈವೋರ್ಸ್) ಪ್ರಕರಣವೇ ಈ ದಾರುಣ ಅಂತ್ಯಕ್ಕೆ ಕಾರಣವಾಗಿದೆ.
ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇಬ್ಬರ ನಡುವೆ ಕಳೆದ ಕೆಲವು ಸಮಯದಿಂದ ಗಂಭೀರ ವೈಮನಸ್ಸು ಉಂಟಾಗಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಡೈವೋರ್ಸ್ ಪ್ರಕರಣ ನಡೆಯುತ್ತಿತ್ತು.
ತಮಿಳುನಾಡಿನ ಸೇಲಂ ಮೂಲದ ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಇತ್ತೀಚೆಗೆ ರಿಸೈನ್ ಮಾಡಿದ್ದ. ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು. ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಿದ್ದೆ ಕೊಲೆಗೆ ಕಾರಣ ಎನ್ನಲಾಗಿದೆ.
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಭಾನುವಾರ ಬಾಲ ಮುರುಗನ್ ಮತ್ತು ಭುವನೇಶ್ವರಿ ಇಬ್ಬರೂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಡೈವೋರ್ಸ್ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿಕೊಂಡು ಹೊರಬಂದ ನಂತರ, ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ಜಗಳ ಕ್ರಮೇಣ ತಾರಕಕ್ಕೇರಿದ್ದು, ಏಕಾಏಕಿ ಬಾಲ ಮುರುಗನ್ ತನ್ನ ಬಳಿ ಹೊಂದಿದ್ದ ಪಿಸ್ತೂಲ್ ತೆಗೆದು ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ.
ಈ ಘಟನೆ ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆದಿರುವುದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಭುವನೇಶ್ವರಿಯನ್ನು ತಕ್ಷಣ ಶಾನುಭೋಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆ ನಡೆಸಿದ ಬಳಿಕ ಆರೋಪಿ ಬಾಲ ಮುರುಗನ್ ಸ್ವತಃ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾಹಿತಿ ಪಡೆದ ತಕ್ಷಣ ಮಾಗಡಿ ರಸ್ತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

