Thursday, January 1, 2026

ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಸರಣಿ ಬಾಂಬ್ ಬೆದರಿಕೆ: ಭದ್ರತೆ ಹೆಚ್ಚಿಸಿದ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರಂತರವಾಗಿ ಬರುತ್ತಿರುವ ಬಾಂಬ್ ಬೆದರಿಕೆ ಇಮೇಲ್‌ಗಳು ಹೈದರಾಬಾದ್ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್‌ಗೆ ತಳ್ಳಿವೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಮೂರು ವಿಭಿನ್ನ ವಿಮಾನಗಳ ಹೆಸರಿನಲ್ಲಿ ಬೆದರಿಕೆ ಸಂದೇಶಗಳು ಬಂದಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣ ಆವರಣದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಜಾರಿಗೆ ಬಂದಿವೆ.

ವಿಮಾನ ನಿಲ್ದಾಣದ ಗ್ರಾಹಕ ಬೆಂಬಲ ಇಮೇಲ್ ಐಡಿಗೆ ಈ ಬೆದರಿಕೆ ಸಂದೇಶಗಳು ಕಳುಹಿಸಲಾಗಿದ್ದು, ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನಿರ್ವಹಣೆಯಲ್ಲಿರುವ ಜಿಎಂಆರ್ ಸಂಸ್ಥೆ ಸ್ಪಷ್ಟಪಡಿಸಿದೆ. ಶನಿವಾರ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ಆಗಮಿಸಿದ ಬ್ರಿಟಿಷ್ ಏರ್‌ವೇಸ್‌ನ ಬಿಎ 277 ವಿಮಾನಕ್ಕೆ ಸಂಬಂಧಿಸಿದ ಬೆದರಿಕೆ ಇಮೇಲ್‌ಗೂ ಮುನ್ನೆಚ್ಚರಿಕೆ ವಹಿಸಲಾಗಿದ್ದು, ವಿಮಾನವು ಬೆಳಗಿನ ಜಾವ ಸುರಕ್ಷಿತವಾಗಿ ಇಳಿದ ಬಳಿಕ ಸೂಕ್ಷ್ಮ ತಪಾಸಣೆಗೆ ಒಳಪಡಿಸಲಾಯಿತು.

ಇದೇ ದಿನ ಕುವೈತ್‌ನಿಂದ ಹೈದರಾಬಾದ್‌ಗೆ ಬರಬೇಕಿದ್ದ ಕುವೈತ್ ಏರ್‌ವೇಸ್ ವಿಮಾನಕ್ಕೂ ಬೆದರಿಕೆ ಬಂದ ಹಿನ್ನೆಲೆಯಲ್ಲಿ, ಅದನ್ನು ಮಧ್ಯದಲ್ಲೇ ಕುವೈತ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಯಿತು. ಡಿಸೆಂಬರ್ 5ರಂದು ದೆಹಲಿಯಿಂದ ಹೈದರಾಬಾದ್‌ಗೆ ಆಗಮಿಸಿದ ಏರ್ ಇಂಡಿಯಾ ವಿಮಾನಕ್ಕೂ ಇಮೇಲ್ ಮೂಲಕ ಬೆದರಿಕೆ ಬಂದಿದ್ದು, ರಾತ್ರಿ ವೇಳೆಗೆ ವಿಮಾನವು ಸುರಕ್ಷಿತವಾಗಿ ಇಳಿಯಿತು. ಜೊತೆಗೆ ಸೌದಿ ಅರೇಬಿಯಾದ ಮದೀನಾದಿಂದ ಹೊರಟಿದ್ದ ಇಂಡಿಗೋ ವಿಮಾನವನ್ನೂ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅಹಮದಾಬಾದ್‌ಗೆ ತಿರುಗಿಸಲಾಯಿತು.

ಎಲ್ಲಾ ಪ್ರಕರಣಗಳಲ್ಲಿ ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಸಹಕಾರದೊಂದಿಗೆ ವಿಮಾನ, ಪ್ರಯಾಣಿಕರು ಹಾಗೂ ಸಾಮಾನುಗಳ ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಯಾವುದೇ ಅಪಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ವಿಮಾನ ನಿಲ್ದಾಣ ಆಡಳಿತ ಪುನರುಚ್ಚರಿಸಿದೆ.

error: Content is protected !!