ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ನಿತ್ಯದ ಟ್ರಾಫಿಕ್ ನ ನಡುವೆ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರ ಆರೋಗ್ಯ ಕಾಳಜಿಗೆ ಮಹತ್ವದ ಹೆಜ್ಜೆಯೊಂದು ಇಟ್ಟಿದೆ. ಕರ್ತವ್ಯದ ನಡುವೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದ ಸಿಬ್ಬಂದಿಗೆ ನೆರವಾಗುವ ಉದ್ದೇಶದಿಂದ ‘ಹೈಜೀನ್ ಆನ್ ಗೋ’ ಸಂಚಾರಿ ಶೌಚಾಲಯ ವಾಹನಗಳ ಸೇವೆಯನ್ನು ಆರಂಭಿಸಲಾಗಿದೆ.
ರೆನಾಲ್ಟ್ ನಿಸಾನ್ ಟೆಕ್ನಾಲಜಿ ಆ್ಯಂಡ್ ಬಿಸಿನೆಸ್ ಸೆಂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಸಿಎಸ್‌ಆರ್ ಯೋಜನೆಯಡಿಯಲ್ಲಿ ಈ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಗೆ ಒದಗಿಸಿದೆ. ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ರೂಪುಗೊಂಡ ಈ ಸಂಚಾರಿ ಶೌಚಾಲಯಗಳು, ತೀವ್ರ ವಾಹನ ದಟ್ಟಣೆ ಇರುವ ರಸ್ತೆಗಳಲ್ಲೇ ಪೊಲೀಸರಿಗೆ ಸುಲಭವಾಗಿ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಶಿಫ್ಟ್ ವೇಳೆಯಲ್ಲಿ ಶೌಚಾಲಯಕ್ಕೆ ಹೋಗಲು ಅವಕಾಶವಿಲ್ಲದ ಕಾರಣ ಉಂಟಾಗುತ್ತಿದ್ದ ನಿರ್ಜಲೀಕರಣ, ಮೂತ್ರನಾಳದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಣಿಸಂದ್ರ, ಆಡುಗೋಡಿ ಮತ್ತು ಮೈಸೂರು ರಸ್ತೆ ಸೇರಿದಂತೆ ನಗರದ 91 ಪೂರ್ವನಿಗದಿತ ಸ್ಥಳಗಳಲ್ಲಿ ಈ ವಾಹನಗಳು ದಿನನಿತ್ಯ ಬೆಳಗ್ಗೆ 8.30 ರಿಂದ ಸಂಜೆ 7ರವರೆಗೆ ಸೇವೆ ನೀಡಲಿವೆ. ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ಈ ಸೌಲಭ್ಯ ಮಹತ್ತರ ಸಹಾಯವಾಗಲಿದೆ. ಈ ಯೋಜನೆಗೆ ಒಟ್ಟು ಸುಮಾರು 80 ಲಕ್ಷ ರೂ. ವೆಚ್ಚವಿರುವುದು ತಿಳಿದುಬಂದಿದೆ.

