Sunday, September 14, 2025

ನಾನು ಶಿವನ ಭಕ್ತ, ನಿಂದನೆಗಳ ವಿಷವನ್ನು ನುಂಗುತ್ತೇನೆ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾನು ಶಿವನ ಭಕ್ತನಾಗಿದ್ದು, ನಿಂದನೆಗಳ ವಿಷವನ್ನು ನುಂಗುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಸ್ಸಾಂನ ದರಂಗ್‌ನಲ್ಲಿ ಅಭಿವೃದ್ಧಿಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಶಿವನ ಭಕ್ತ, ಎಲ್ಲಾ ವಿಷವನ್ನು ನಾನು ನುಂಗುತ್ತೇನೆ. ನನಗೆ ಎಷ್ಟೇ ನಿಂದನೆ ಮಾಡಿದರೂ ತಡೆಯುತ್ತೇನೆ. ಆದ್ರೆ ಬೇರೆಯವರಿಗೆ ಅವಮಾನವಾದ್ರೆ, ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದು ವಿಪಕ್ಷಗಳ ವಿರುದ್ಧ ಅಬ್ಬರಿಸಿದರು.

ನನಗೆ ಗೊತ್ತು, ಇಡೀ ಕಾಂಗ್ರೆಸ್ ಪರಿಸರ ವ್ಯವಸ್ಥೆಯು ನನ್ನನ್ನು ಗುರಿಯಾಗಿಸಿಕೊಂಡು ಮೋದಿ ಮತ್ತೆ ಅಳುತ್ತಿದ್ದಾರೆ ಎಂದು ಹೇಳುತ್ತದೆ. ಜನರೇ ನನ್ನ ದೇವರು; ನಾನು ನನ್ನ ನೋವನ್ನು ಅವರ ಮುಂದೆ ವ್ಯಕ್ತಪಡಿಸದಿದ್ದರೆ, ನಾನು ಅದನ್ನು ಮತ್ತೆಲ್ಲಿ ಮಾಡಲಿ? ಅವರು ನನ್ನ ಯಜಮಾನರು, ನನ್ನ ದೇವತೆಗಳು ಮತ್ತು ನಾನು ಅವರ ರಿಮೋಟ್ ಕಂಟ್ರೋಲ್. ನನ್ನ ಬಳಿ ಬೇರೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ’ ಎಂದು ಅವರು ಹೇಳಿದರು.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧವೂ ಗುಡುಗಿದ ಮೋದಿ, ಪಾಕಿಸ್ತಾನದಿಂದ ಪೋಷಿಸಲ್ಪಟ್ಟ ಭಯೋತ್ಪಾದಕರನ್ನು ಕಾಂಗ್ರೆಸ್‌ ಬೆಂಬಲಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ 1962ರ ಭಾರತ-ಚೀನಾ ಯುದ್ಧವನ್ನು ಉಲ್ಲೇಖಿಸಿ ನೆಹರೂ ವಿರುದ್ಧವೂ ಮಾತನಾಡಿದರು. ಚೀನಾ ಯುದ್ಧದ ಬಳಿಕ ದೇಶದ ಮೊದಲ ಪ್ರಧಾನಿ ಈಶಾನ್ಯ ಜನರಿಗೆ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ ಎಂದು ದೂರಿದರು.

ಇನ್ನೂ ಆಪರೇಷನ್‌ ಸಿಂದೂರ ಯಶಸ್ಸನ್ನು ಸ್ಮರಿಸಿದ ಮೋದಿ, ಅಮ್ಮ ಕಾಮಾಕ್ಯಳಿಂದ ಆಪರೇಷನ್‌ ಸಿಂದೂರ ಅದ್ಭುತ ಯಶಸ್ಸು ಸಾಧಿಸಿದೆ.

ಕಾಂಗ್ರೆಸ್‌ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು. ಈಗ ಕೆಣಕಿದ್ರೆ ನಮ್ಮ ಪಡೆಗಳು ಆಪರೇಷನ್‌ ಸಿಂದೂರ್‌ ನಡೆಸುತ್ತವೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ. ಆದ್ರೆ ಕಾಂಗ್ರೆಸ್‌ ನಾಯಕರು ಮಾತ್ರ ಪಾಕಿಸ್ತಾನದ ಸೇನೆಯ ಪರವಾಗಿ ನಿಲ್ಲುತ್ತಾರೆ, ಪಾಕಿಸ್ತಾನದ ಅಜೆಂಡಾಗಳನ್ನ ಮುಂದಿಡ್ತಾರೆ. ಪಾಕಿಸ್ತಾನದ ಸುಳ್ಳುಗಳೇ ಕಾಂಗ್ರೆಸ್‌ ಅಜೆಂಡಾಗಳಾಗುತ್ತವೆ. ಆದ್ದರಿಂದ ಕಾಂಗ್ರೆಸ್‌ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ