ಹೊಸದಿಗಂತ ಹಾವೇರಿ:
“ರಾಜಕಾರಣದಲ್ಲಿ ಮುಂದುವರಿಯಲು ಜನರ ಆಶೀರ್ವಾದವೇ ಶ್ರೀರಕ್ಷೆ. ಜನರ ಪ್ರೀತಿ ಇರುವವರೆಗೂ ನಾನು ರಾಜಕೀಯದಲ್ಲಿ ಇರುತ್ತೇನೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಾವೇರಿಯ ಕೊಳ್ಳಿ ಪಾಲಿಟೆಕ್ನಿಕ್ ಆವರಣದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಆಡಳಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸುವುದರ ಜೊತೆಗೆ ಪ್ರತಿಪಕ್ಷ ಬಿಜೆಪಿಯ ಟೀಕೆಗಳಿಗೆ ಕಡಕ್ ತಿರುಗೇಟು ನೀಡಿದರು.
500 ಕೋಟಿ ವೆಚ್ಚದ ವೈದ್ಯಕೀಯ ಕಾಲೇಜು ಲೋಕಾರ್ಪಣೆ
ಹಾವೇರಿ ವೈದ್ಯಕೀಯ ಕಾಲೇಜು ಕಾಮಗಾರಿ ಕುರಿತು ಮಾತನಾಡಿದ ಸಿಎಂ, “ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವೈದ್ಯಕೀಯ ಕಾಲೇಜನ್ನು ಘೋಷಣೆ ಮಾಡಿದ್ದೂ ನಾನೇ, ಈಗ ಉದ್ಘಾಟಿಸುತ್ತಿರುವುದೂ ನಾನೇ. ಈಗಾಗಲೇ ಇಲ್ಲಿ ಮೂರನೇ ಬ್ಯಾಚ್ ಶಿಕ್ಷಣ ಪಡೆಯುತ್ತಿದೆ. ನಾಲ್ಕು ವರ್ಷ ಅಧಿಕಾರದಲ್ಲಿದ್ದ ಬಿಜೆಪಿಯವರು ಈ ಯೋಜನೆಯನ್ನು ಏಕೆ ಪೂರ್ಣಗೊಳಿಸಲಿಲ್ಲ?” ಎಂದು ಪ್ರಶ್ನಿಸಿದರು.
ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ಬಿಜೆಪಿ ಟೀಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಮುಖ್ಯಮಂತ್ರಿಗಳು, ಬಿಜೆಪಿಯವರು ‘ಸುಳ್ಳು ಹೇಳುವುದರಲ್ಲಿ ನಿಸ್ಸೀಮರು’ ಎಂದು ವ್ಯಂಗ್ಯವಾಡಿದರು. ಜಿಎಸ್‌ಟಿ ವಿಚಾರವಾಗಿ ಕೇಂದ್ರದ ವಿರುದ್ಧ ಹರಿಹಾಯ್ದ ಅವರು ಈ ಕೆಳಗಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು:
ಜಿಎಸ್‌ಟಿ ಜಾರಿಯಿಂದಾಗಿ ಕರ್ನಾಟಕಕ್ಕೆ ಈ ವರ್ಷ 5 ರಿಂದ 6 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ.
ರಾಜ್ಯವು ಸುಮಾರು 4.5 ಲಕ್ಷ ಕೋಟಿ ರೂಪಾಯಿ ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸುತ್ತದೆ. ಆದರೆ ನಮಗೆ ಮರಳಿ ಸಿಗುವುದು ಕೇವಲ 60 ರಿಂದ 70 ಸಾವಿರ ಕೋಟಿ ಮಾತ್ರ. ಅಂದರೆ, ರಾಜ್ಯ ನೀಡುವ ಪ್ರತಿ 1 ರೂಪಾಯಿಗೆ ಕೇವಲ 14 ಪೈಸೆ ಮಾತ್ರ ವಾಪಸ್ ಬರುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿದ್ದ 5,300 ಕೋಟಿ ರೂ. ಹಾಗೂ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ.
ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಮತ್ತು ಕೆರೆಗಳ ಅಭಿವೃದ್ಧಿಗೆ ತಲಾ 3,000 ಕೋಟಿ ರೂ. ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಈವರೆಗೆ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

