Thursday, December 11, 2025

ಐಶ್ವರ್ಯಾ ರೈಗಾಗಿ ಕಾಯಲು ನಾನು ರೆಡಿ…: ಪಡೆಯಪ್ಪ ಸಿನಿಮಾ ಕುರಿತು ರಜನೀಕಾಂತ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್;

ರಜನೀಕಾಂತ್ ಬ್ಲಾಕ್ ಬಸ್ಟರ್ ಸಿನಿಮಾ ‘ಪಡೆಯಪ್ಪ’. ರಜನೀಕಾಂತ್ ಅವರು ತಮ್ಮ ಸ್ವಾಗ್, ಸ್ಟೈಲ್​​ನಿಂದ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದ ಸಿನಿಮಾ ಇದು. ಮಾತ್ರವಲ್ಲದೆ, ಸಿನಿಮಾದ ವಿಲನ್ ರಮ್ಯಾಕೃಷ್ಣ ಪಾತ್ರಕ್ಕೂ ಸಹ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿತ್ತು. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಸಿನಿಮಾದ ಸೀಕ್ವೆಲ್​​ ಬಗ್ಗೆಯೂ ರಜನೀಕಾಂತ್ ಮಾತನಾಡಿದ್ದಾರೆ.

‘ಪಡೆಯಪ್ಪ’ ಸಿನಿಮಾ ಡಿಸೆಂಬರ್ 12ರಂದು ಮರು ಬಿಡುಗಡೆ ಆಗುತ್ತಿದೆ. 1999 ರಲ್ಲಿ ಮೊದಲಿಗೆ ಬಿಡುಗಡೆ ಆಗಿದ್ದ ‘ಪಡೆಯಪ್ಪ’ ಇದೀಗ 25 ವರ್ಷಗಳ ಬಳಿಕ ಮತ್ತೆ ಬಿಡುಗಡೆ ಆಗುತ್ತಿದೆ.

ಸಿನಿಮಾದ ಮರು ಬಿಡುಗಡೆ ಕುರಿತಾಗಿ ರಜನೀಕಾಂತ್ ಅವರ ವಿಡಿಯೋ ಒಂದು ಬಿಡುಗಡೆ ಆಗಿದ್ದು, ವಿಡಿಯೋನಲ್ಲಿ ‘ಪಡೆಯಪ್ಪ’ ಸಿನಿಮಾ ಕುರಿತಾಗಿ ಅವರು ಮಾತನಾಡಿದ್ದಾರೆ. ‘ಪಡೆಯಪ್ಪ’ ಸಿನಿಮಾವನ್ನು ಬೇರೆಯವರ ಹೆಸರಲ್ಲಿ ತಾವೇ ನಿರ್ಮಾಣ ಮಾಡಿದ್ದಾಗಿ ಹೇಳಿಕೊಂಡಿರುವ ರಜನೀಕಾಂತ್, ಅದರ ಹಕ್ಕು ಸನ್ ಬಳಿ ಮಾತ್ರವೇ ಇದೆ, ಅವರ ಬಳಿಯೇ ಇರಲಿ, ಜನ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ನೋಡಲಿ ಎಂಬುದು ನನ್ನ ಆಸೆಯಾಗಿತ್ತು ಎಂದಿದ್ದಾರೆ.

ಇನ್ನು ‘ಪಡೆಯಪ್ಪ’ ಸಿನಿಮಾದ ಚಿತ್ರೀಕರಣದ ಬಗ್ಗೆ ಮಾತನಾಡಿರುವ ರಜನೀಕಾಂತ್, ಆ ಸಿನಿಮಾನಲ್ಲಿ ವಿಲನ್ ಪಾತ್ರಕ್ಕೆ ಮಹಿಳೆಯನ್ನು ಇಡುವ ಆಲೋಚನೆ ಹೊಸದಾಗಿತ್ತು. ಆ ವಿಲನ್ ‘ನೀಲಾಂಬರಿ’ ಪಾತ್ರಕ್ಕೆ ನಾವು ಐಶ್ವರ್ಯಾ ರೈ ಅವರನ್ನು ಕೇಳಿದ್ದೆವು. ಆಗ ಐಶ್ವರ್ಯಾ ರೈ ಅವರನ್ನು ಸಂಪರ್ಕಿಸಲು ಬಹಳ ಕಷ್ಟಪಟ್ಟಿದ್ದೆವು, ಆದರೆ ಐಶ್ವರ್ಯಾ ರೈ ಆಸಕ್ತಿ ತೋರಿಸಲಿಲ್ಲ. ಐಶ್ವರ್ಯಾ ರೈ ಆಸಕ್ತಿ ತೋರಿಸಿದ್ದಿದ್ದರೆ ಅವರಿಗಾಗಿ ಎರಡು ಮೂರು ವರ್ಷ ಕಾಯಲು ಸಹ ನಾನು ರೆಡಿ ಇದ್ದೆ. ಐಶ್ವರ್ಯಾ ರೈ ಬಳಿಕ ನಾವು ಶ್ರೀದೇವಿ ಅಥವಾ ಮಾಧುರಿ ದೀಕ್ಷಿತ್ ಅವರನ್ನು ಸಹ ಕಾಸ್ಟ್ ಮಾಡಲು ಯೋಚಿಸಿದ್ದೆವು, ಆದರೆ ಅವರು ಸೂಕ್ತವಲ್ಲ ಎನಿಸಿತು, ಬಳಿಕ ರವಿಕುಮಾರ್ ಸಲಹೆ ನೀಡಿದಂತೆ ರಮ್ಯಾಕೃಷ್ಣ ಅವರನ್ನು ‘ನೀಲಾಂಬರಿ’ ಪಾತ್ರಕ್ಕೆ ಫೈನಲ್ ಮಾಡಿದೆವು’ ಎಂದು ನೆನಪು ಮಾಡಿಕೊಂಡಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿಯೇ, ಮಹಿಳೆಯರು ಗೇಟುಗಳನ್ನು ತಳ್ಳಿಕೊಂಡು ಸಿನಿಮಾ ನೋಡಲು ಬಂದಿದ್ದು ‘ಪಡೆಯಪ್ಪ’ ಸಿನಿಮಾಕ್ಕೆ ಮಾತ್ರ. ನೀಲಾಂಬರಿ ಪಾತ್ರ ಅವರಿಗೆಲ್ಲ ಸಖತ್ ಇಷ್ಟವಾಗಿತ್ತು. ರಮ್ಯಾಕೃಷ್ಣ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದರು. ಈಗ ‘ರೊಬೊ 2’, ‘ಜೈಲರ್ 2’ ಎಂದೆಲ್ಲ ಮಾಡುತ್ತಿರುವಾಗ ನಾವೇಕೆ ‘ಪಡೆಯಪ್ಪ 2’ ಮಾಡಬಾರದು ಎಂಬ ಆಲೋಚನೆ ಬರುತ್ತಿದೆ. ಆದರೆ ಈ ಬಾರಿ ನೀಲಾಂಬರಿ ಪಾತ್ರವನ್ನೇ ಪ್ರಧಾನ ಇಟ್ಟುಕೊಂಡು, ‘ನೀಲಾಂಬರಿ: ಪಡೆಯಪ್ಪ’ ಎಂಬ ಸಿನಿಮಾ ಮಾಡುವ ಆಲೋಚನೆ ಇದೆ. ಕಥೆ ನಾನೇ ಬರೆಯುತ್ತಿದ್ದೇನೆ’ ಎಂದಿದ್ದಾರೆ ರಜನೀಕಾಂತ್.

1999 ರಲ್ಲಿ ಬಿಡುಗಡೆ ಆಗಿದ್ದ ‘ಪಡೆಯಪ್ಪ’ ಸಿನಿಮಾಕ್ಕೂ ರಜನೀಕಾಂತ್ ಅವರೇ ಕಥೆ ಬರೆದಿದ್ದರು.

error: Content is protected !!