Saturday, December 20, 2025

ನಾನೇ ಡೈರೆಕ್ಟರ್, ನಾನೇ ಆಕ್ಟರ್: ಕುರ್ಚಿ ಕದನಕ್ಕೆ ಸಿದ್ದರಾಮಯ್ಯ ಫುಲ್ ಸ್ಟಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಳಿಗಾಲದ ಅಧಿವೇಶನ ಕೇವಲ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಮಾತ್ರವಲ್ಲದೆ, ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯ ಚರ್ಚೆಗೂ ಸಾಕ್ಷಿಯಾಯಿತು. ಅಧಿವೇಶನದ ಕಡೇ ದಿನ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯ ಕುರಿತು ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಕಲಾಪದ ನಡುವೆ ವಿಪಕ್ಷ ನಾಯಕ ಆರ್. ಅಶೋಕ್ ಅವರು, “ಕಳೆದ ನಾಲ್ಕು ದಿನಗಳಿಂದ ನೀವು ಬಳಲಿದಂತೆ ಕಾಣುತ್ತಿದ್ದೀರಿ, ನಮಗೆ ಅದು ರಾಜಕೀಯ ನಿಶ್ಯಕ್ತಿ ಅಂತ ಅನ್ನಿಸುತ್ತಿದೆ” ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಎಂ, “ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ. ಅಂತಹ ಸಂದರ್ಭವೇ ಸೃಷ್ಟಿಯಾಗುವುದಿಲ್ಲ. ರಾಜಕೀಯವನ್ನು ಅತಿಯಾಗಿ ತಲೆಗೆ ಹಾಕಿಕೊಳ್ಳುವ ಅಗತ್ಯ ನನಗಿಲ್ಲ” ಎಂದು ತಿರುಗೇಟು ನೀಡಿದರು.

ಸದನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಲೇ, ಅಧಿಕಾರ ಹಂಚಿಕೆಯ ವಿಚಾರವಾಗಿ ಎದ್ದಿದ್ದ ಪ್ರಶ್ನೆಗಳಿಗೆ ಸಿದ್ದರಾಮಯ್ಯ ‘ಬ್ರಹ್ಮಾಸ್ತ್ರ’ ಪ್ರಯೋಗಿಸಿದರು. “ಎರಡೂವರೆ ವರ್ಷಕ್ಕೆ ಸಿಎಂ ಬದಲಾವಣೆ ಎಂಬ ಯಾವುದೇ ತೀರ್ಮಾನ ಹೈಕಮಾಂಡ್ ಮಟ್ಟದಲ್ಲಿ ಆಗಿಲ್ಲ. ಶಾಸಕರು ನನ್ನನ್ನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ನನ್ನ ಪರವಾಗಿಯೇ ಇದೆ” ಎಂದು ಸ್ಪಷ್ಟಪಡಿಸಿದರು.

ಅಧಿಕಾರ ಹಂಚಿಕೆಯ ಚರ್ಚೆಗೆ ಪೂರ್ಣವಿರಾಮ ಹಾಕಿದ ಅವರು, “ರಾಜಕೀಯದಲ್ಲಿ ನಮಗೆ ಯಾರೂ ನಿರ್ದೇಶನ ನೀಡುವವರಿಲ್ಲ. ನಮಗೆ ನಾವೇ ಡೈರೆಕ್ಟರ್, ನಾವೇ ಪ್ರೊಡ್ಯೂಸರ್ ಮತ್ತು ನಾವೇ ಆಕ್ಟರ್‌ಗಳು” ಎನ್ನುವ ಮೂಲಕ ತಮ್ಮ ಸ್ವಾಯತ್ತತೆಯನ್ನು ಪ್ರದರ್ಶಿಸಿದರು. “ಜನರ ಆಶೀರ್ವಾದ ಇರುವವರೆಗೆ ಮಾತ್ರ ಅಧಿಕಾರ ಇರುತ್ತದೆ. ನನಗೆ ದೈಹಿಕವಾಗಿ ಸ್ವಲ್ಪ ಸುಸ್ತಾಗಿರಬಹುದು, ಆದರೆ ರಾಜಕೀಯವಾಗಿ ನಾನು ಸದಾ ಸದೃಢ” ಎಂದು ಹೇಳುವ ಮೂಲಕ ಸ್ವಪಕ್ಷೀಯ ವಿರೋಧಿಗಳಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

error: Content is protected !!