ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆನೆಜುವೆಲಾ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಟ್ರಂಪ್ ಅವರ ಆಸಕ್ತಿ ಕೇವಲ ವೆನೆಜುವೆಲಾದ ತೈಲ ಸಂಪತ್ತಿಗಷ್ಟೇ ಸೀಮಿತವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನದ ಬಳಿಕ, ಅಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ಟ್ರಂಪ್ ಮಾಡುತ್ತಿರುವ ಹೇಳಿಕೆಗಳು ಗಮನ ಸೆಳೆಯುತ್ತಿವೆ.
ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಖಾತೆಯಲ್ಲಿ ತಮ್ಮನ್ನು “ವೆನೆಜುವೆಲಾದ ಹಂಗಾಮಿ ಅಧ್ಯಕ್ಷ” ಎಂದು ಬಣ್ಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರಂಪ್ ಅವರ ಉದ್ದೇಶಗಳ ಕುರಿತು ಹಲವರು ಪ್ರಶ್ನೆ ಎತ್ತಿದ್ದಾರೆ. ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಬೆಳವಣಿಗೆಯ ನಡುವೆ ಈ ಪೋಸ್ಟ್ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ವೆನೆಜುವೆಲಾದ ತೈಲ ನಿಕ್ಷೇಪಗಳ ಕುರಿತು ಟ್ರಂಪ್ ನಿರಂತರವಾಗಿ ಅಮೆರಿಕದ ತೈಲ–ಅನಿಲ ಕಂಪನಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಮಡುರೊ ಬಂಧನದ ನಂತರ, ನ್ಯಾಯಯುತ ಅಧಿಕಾರ ವರ್ಗಾವಣೆಯಾಗುವವರೆಗೆ ವೆನೆಜುವೆಲಾ ಆಡಳಿತವನ್ನು ಅಮೆರಿಕ ನೋಡಿಕೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ವೆನೆಜುವೆಲಾದಲ್ಲಿ ಹೂಡಿಕೆಗಳು ನೇರವಾಗಿ ಯುನೈಟೆಡ್ ಸ್ಟೇಟ್ಸ್ ಜೊತೆ ನಡೆಯಲಿವೆ ಎಂದು ಶ್ವೇತಭವನದಲ್ಲಿ ತೈಲ ಕಂಪನಿಗಳ ಮುಖ್ಯಸ್ಥರಿಗೆ ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ವೆನೆಜುವೆಲಾ ಕುರಿತ ಅಮೆರಿಕದ ಮುಂದಿನ ನಡೆ ಬಗ್ಗೆ ಜಾಗತಿಕ ಕುತೂಹಲವನ್ನು ಹೆಚ್ಚಿಸಿವೆ.

