ಹೊಸದಿಗಂತ ಡಿಜಿಟಲ್ ಡೆಸ್ಕ್:
2017ರ ಉನ್ನಾವ್ ಅತ್ಯಾಚಾರ ಪ್ರಕರಣದ ಅಪರಾಧಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದ್ದು, ಇದೀಗ ಇದನ್ನು ಖಂಡಿಸಿ ಸಂತ್ರಸ್ತೆ, ಆಕೆಯ ತಾಯಿ ಮತ್ತು ಮಹಿಳಾ ಕಾರ್ಯಕರ್ತೆ ಯೋಗಿತಾ ಭಯನಾ ದೆಹಲಿ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಹೈಕೋರ್ಟ್ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ, ತನ್ನ ಕುಟುಂಬ, ವಕೀಲರು ಮತ್ತು ಸಾಕ್ಷಿಗಳಿಗೆ ನೀಡಲಾದ ಭದ್ರತೆಯನ್ನು ಏಕೆ ಹಿಂತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟುವುದಾಗಿ ಹೇಳಿದರು.
‘ತೀರ್ಪು ಕೇಳಿ ನನಗೆ ತುಂಬಾ ನೋವಾಯಿತು. ಆಗಲೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ, ಆದರೆ ನನ್ನ ಕುಟುಂಬದ ಬಗ್ಗೆ ಯೋಚಿಸಿ ಸುಮ್ಮನಾದೆ. ನಮಗೆ ಅನ್ಯಾಯ ಮಾಡಲಾಗಿದೆ. ಚುನಾವಣೆಗಳು ಬರುತ್ತಿವೆ. ಹೀಗಾಗಿ, ಆರೋಪಿಯ ಹೆಂಡತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅತ್ಯಾಚಾರ ಆರೋಪಿಯೇ ಜೈಲಿನಿಂದ ಹೊರಬಂದರೆ, ನಾವು ಸುರಕ್ಷಿತವಾಗಿರುವುದು ಹೇಗೆ? ನಾವೆಲ್ಲರೂ ಅಸುರಕ್ಷಿತರಾಗಿದ್ದೇವೆ. ಹೀಗಾಗಿ, ಜಾಮೀನು ರದ್ದುಪಡಿಸಿ, ಆತನನ್ನು ಜೈಲಿಗೆ ಕಳುಹಿಸಬೇಕು. ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ನನಗೆ ಸುಪ್ರೀಂಕೋರ್ಟ್ ಮೇಲೆ ನಂಬಿಕೆ ಇದೆ. ಅಪರಾಧಿ ಬಿಡುಗಡೆಯಾಗಿರುವುದರಿಂದ ನಮಗೆ ನಮಗೆ ಭಯವಾಗುತ್ತಿದೆ. ನನಗೆ ವಯಸ್ಸಾದ, ಅಂಗವಿಕಲ ಅತ್ತೆ, ಗಂಡ ಹಾಗೂ ಚಿಕ್ಕ ಮಕ್ಕಳಿದ್ದಾರೆ. ಮಕ್ಕಳ ಸುರಕ್ಷತೆಯೇ ದೊಡ್ಡ ಸವಾಲಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ, ವಾದ ಮುಗಿದ ಎರಡು ಅಥವಾ ಮೂರು ದಿನಗಳಲ್ಲಿ ತೀರ್ಪು ಪ್ರಕಟವಾಗುತ್ತದೆ. ಆದರೆ ಈ ಪ್ರಕರಣದಲ್ಲಿ, ತೀರ್ಪು ಮೂರು ತಿಂಗಳ ನಂತರ ಬಂದಿದೆ. ಆದರೆ ಆದೇಶ ಬರುವ ಮುನ್ನವೇ ನಮ್ಮ ಕುಟುಂಬ ಮತ್ತು ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಯಿತು. ವಿಚಾರಣೆ ಸಮಯದಲ್ಲಿ ನಮ್ಮ ಕುಟುಂಬವು ನಿರಂತರವಾಗಿ ನ್ಯಾಯಾಲಯಕ್ಕೆ ಸುತ್ತಾಡಬೇಕಾಯಿತು ಎಂದು ಸಂತ್ರಸ್ತೆ ಆರೋಪಿಸಿದರು.
ನನ್ನ ತಂದೆಯನ್ನು ಕೊಲೆ ಮಾಡಿದರು. ನನ್ನ ಮೇಲೆ ಅತ್ಯಾಚಾರ ನಡೆಯಿತು. ಆದರೆ ಆರೋಪಿಗೆ ಕೆಲವು ವರ್ಷಗಳ ಜೈಲು ಶಿಕ್ಷೆಯ ನಂತರ ಜಾಮೀನು ನೀಡಲಾಗಿದೆ. ಇದು ಯಾವ ರೀತಿಯ ನ್ಯಾಯ? ಎಂದು ಸಂತ್ರಸ್ತೆ ಪ್ರಶ್ನಿಸಿದರು.
2017ರ ಅತ್ಯಾಚಾರ ಪ್ರಕರಣದಲ್ಲಿ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಈ ಪ್ರಕರಣದಲ್ಲಿ ಸೆಂಗಾರ್ ಮೇಲಿನ ಅಪರಾಧ ಸಾಬೀತಾಗುವವರೆಗೆ ಹಾಗೂ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಮುಗಿಯುವವರೆಗೆ ಅವರ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿ, ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಇದೇ ವೇಳೆ ಆರೋಪಿಗೆ ಹಲವು ಷರತ್ತುಗಳನ್ನು ವಿಧಿಸಿದೆ.

