ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತೈಲ ಖರೀದಿಸುತ್ತಿರುವ ಕಾರಣಕ್ಕೆ ಭಾರತದ ಮೇಲೆವಿಧಿಸಿರುವ ಶೇ.50ರಷ್ಟು ಸುಂಕ ಅಧಿಕೃತವಾಗಿ ಜಾರಿಯಾಗಲು ಇನ್ನೆರಡು ದಿನ ಬಾಕಿ ಇದ್ದು, ಈ ನಡುವೆ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಖಡಕ್ ಸಂದೇಶ ನೀಡಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ, ನಮ್ಮ ಸರ್ಕಾರ ಸಣ್ಣ ಉದ್ಯಮಿಗಳು, ರೈತರು ಮತ್ತು ಪ್ರಾಣಿ ಪಾಲನೆ ಮಾಡುವವರಿಗೆ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ. ಎಷ್ಟೇ ಒತ್ತಡ ಬಂದರೂ ನಮ್ಮ ಸರ್ಕಾರ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.
ಇಂದು ಜಗತ್ತಿನಲ್ಲಿ ಎಲ್ಲರೂ ಆರ್ಥಿಕ ಹಿತಾಸಕ್ತಿಗಳನ್ನು ಆಧರಿಸಿದ ರಾಜಕೀಯದಲ್ಲಿ ನಿರತರಾಗಿದ್ದಾರೆ. ಅಹಮದಾಬಾದ್‌ನ ಈ ಭೂಮಿಯಿಂದ ನಾನು ಎಷ್ಟೇ ಒತ್ತಡ ಬಂದರೂ, ಅದನ್ನ ತಡೆದುಕೊಳ್ಳುವ ಶಕ್ತಿ ಬೆಳೆಸಿಕೊಂಡಿದ್ದೇವೆ. ನಮ್ಮ ದೇಶದ ಸಣ್ಣ ಉದ್ಯಮಿಗಳು, ರೈತರಿಗೆ ನಾನು ಭರವಸೆ ಕೊಡ್ತೇನೆ. ಈ ಮೋದಿಗೆ ನಿಮ್ಮ ಹಿತಾಸಕ್ತಿಗಳೇ ಮುಖ್ಯ. ನನ್ನ ಸರ್ಕಾರವು ಸಣ್ಣ ಉದ್ಯಮಿಗಳು, ರೈತರು ಮತ್ತು ಜಾನುವಾರು ಮಾಲೀಕರಿಗೆ ತೊಂದರೆ ಮಾಡಲು ಎಂದಿಗೂ ಅವಕಾಶ ಕೊಡಲ್ಲ. ಎಷ್ಟೇ ಒತ್ತಡ ಬಂದರೂ ಅದನ್ನು ತಡೆದು ಪರಿಹಾರ ಕಂಡುಕೊಳ್ಳುವ ಹಾಗೂ ನಮ್ಮ ಶಕ್ತಿ ಹೆಚ್ಚಿಸಿಕೊಳ್ಳುತ್ತೇವೆ ಎಂದು ಮೋದಿ ಗುಡುಗಿದ್ದಾರೆ.
ಆತ್ಮನಿರ್ಭರ ಭಾರತ ಅಭಿಯಾನವು ಗುಜರಾತ್‌ನಿಂದ ಸಾಕಷ್ಟು ಶಕ್ತಿಯನ್ನ ಪಡೆಯುತ್ತಿದೆ. ಪ್ರತಿದಿನ ಇಲ್ಲಿ ಕರ್ಫ್ಯೂ ವಿಧಿಸಲಾಗುತ್ತಿತ್ತು. ಆದ್ರೆ ಆ ದಿನಗಳನ್ನ ಇಂದಿನ ಯುವ ಪೀಳಿಗೆ ನೋಡಿಲ್ಲ. ಇಲ್ಲಿ ವ್ಯಾಪಾರ ಮಾಡುವುದೂ ಕಷ್ಟಕರವಾಗಿತ್ತು. ಆದರಿಂದು ಅಹಮದಾಬಾದ್ ದೇಶದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಇದರ ಹಿಂದೆ 2 ದಶಕಗಳ ಕಠಿಣ ಪರಿಶ್ರಮವಿದೆ ಎಂದು ಬಣ್ಣಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ,’ಆಪರೇಷನ್ ಸಿಂದೂರ್ ನಮ್ಮ ಸೇನೆಯ ಶೌರ್ಯದ, ಭಾರತದ ಇಚ್ಛಾಶಕ್ತಿಯ ಸಂಕೇತವಾಗಿದೆ. ಭಯೋತ್ಪಾದಕರು ಮತ್ತು ಭಯೋತ್ಪಾದಕರ ಯಜಮಾನರು ಎಲ್ಲಿ ಅಡಗಿದ್ದರೂ ಭಾರತ ಬಿಡುವುದಿಲ್ಲ. ಭಾರತ ಪಹಲ್ಗಾಮ್ ದಾಳಿಗೆ ಹೇಗೆ ಸೇಡು ತೀರಿಸಿಕೊಂಡಿದೆ ಎಂದು ಜಗತ್ತು ನೋಡಿದೆ. ನಾವು ನೂರಾರು ಕಿಲೋಮೀಟರ್ ಪಾಕಿಸ್ತಾನದ ಒಳಗೆ ಹೋಗಿ ಭಯೋತ್ಪಾದನೆಯ ಕೇಂದ್ರದ ಮೇಲೆ ದಾಳಿ ಮಾಡಿದ್ದೇವೆ ಎಂದು ಹೇಳಿದ್ದಾರೆ.