ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತದ ಲೋಕದಲ್ಲಿ ಮ್ಯಾಜಿಕ್ ಮಾಡುತ್ತಿದ್ದ ಅರ್ಜುನ್ ಜನ್ಯ ಈಗ ’45’ ಚಿತ್ರದ ಮೂಲಕ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿನಿಮಾ ನೋಡಿದ ಅಭಿಮಾನಿಯೊಬ್ಬರು ವಿಭಿನ್ನವಾಗಿ ವಿಮರ್ಶೆ ಹಂಚಿಕೊಂಡಿದ್ದಾರೆ. “ಅರ್ಜುನ್ ಜನ್ಯ ಅವರು ಇದು ತಮ್ಮ ಮೊದಲ ಸಿನಿಮಾ ಎಂದು ಸುಳ್ಳು ಹೇಳುತ್ತಿದ್ದಾರೆ. ಮೊದಲ ಪ್ರಯತ್ನದಲ್ಲೇ ಇಷ್ಟು ಅದ್ಭುತವಾಗಿ ಸಿನಿಮಾ ಮಾಡಲು ಹೇಗೆ ಸಾಧ್ಯ? ಸುಳ್ಳು ಹೇಳಿದ್ದಕ್ಕಾಗಿ ಅವರ ಮೇಲೆ ಪೊಲೀಸ್ ದೂರು ನೀಡುತ್ತೇನೆ!” ಎಂದು ತಮಾಷೆಯಾಗಿ ತಮ್ಮ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಭಿಮಾನಿಯ ಈ ಕ್ಯೂಟ್ ಕಂಪ್ಲೇಂಟ್‌ಗೆ ಅರ್ಜುನ್ ಜನ್ಯ ಅವರು ಅಷ್ಟೇ ವಿನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಆ ಅಭಿಮಾನಿಯ ವಿಡಿಯೋ ನೋಡಿದೆ, ಅವರು ಬಹಳ ಪ್ರೀತಿಯಿಂದ ಹಾಗೆ ಹೇಳಿದ್ದಾರೆ. ಆದರೆ ಅವರು ಹೇಳಿದ ಮಾತಿನಲ್ಲಿ ಸತ್ಯವಿದೆ. ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಂತಹ ಮೂವರು ದಿಗ್ಗಜ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇತ್ತು. ಆ ಪಾತ್ರಗಳನ್ನು ಬ್ಯಾಲೆನ್ಸ್ ಮಾಡಲು ನಾನು ಬಹಳಷ್ಟು ಶ್ರಮ ಹಾಕಿದ್ದೇನೆ,” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಸಂಗೀತ ನಿರ್ದೇಶಕನಾಗಿ ಗೆದ್ದಿದ್ದ ಜನ್ಯ, ಈಗ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ.

